ಹಿಂದು ಕಾರ್ಯಕರ್ತರ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ

KannadaprabhaNewsNetwork | Published : Jan 10, 2024 1:46 AM

ಸಾರಾಂಶ

ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯ ಸರ್ಕಾರ ಹಿಂದು ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುತ್ತಿರುವುದನ್ನು ಖಂಡಿಸಿ ಮಂಗಳವಾರ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ 6 ತಿಂಗಳಿಂದ ಅಧಿಕಾರಕ್ಕೆ ಬಂದಿರುವ ಸರ್ಕಾರ ಹಿಂದು ಸಂಘಟನೆ ಹಾಗೂ ಹಿಂದು ಕಾರ್ಯಕರ್ತರ ಮೇಲೆ ಕಿರುಕುಳ, ಸುಳ್ಳು ಪ್ರಕರಣ, ಜೈಲು ವಾಸ ನಿರಂತರ ನಡೆಯುತ್ತಿದೆ. ಅಲ್ಲದೇ ಪೊಲೀಸ್‌ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ದೂರಿದರು.

ರಾಜ್ಯ ಸರ್ಕಾರ ಹಿಂದು ವಿರೋಧಿಯಾಗಿ ವರ್ತಿಸುತ್ತಿದೆ. ದುರುದ್ದೇಶದಿಂದ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ಯಪಡಿಸಿದರು.

ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಹಿಂದು ಕಾರ್ಯಕರ್ತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿವೆ. ಗೋವು ರಕ್ಷಿಸುವ ಮತ್ತು ಮತಾಂತರ ತಡೆಯುವ ಹಿಂದು ಸಂಘಟನೆಗಳು ಹಾಗೂ ಕಾರ್ಯಕರ್ತರನ್ನು ಹೆದರಿಸುವ ಕೆಲಸ ನಡೆದಿದೆ. ಹುಬ್ಬಳ್ಳಿಯಲ್ಲಿ 31 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿ, ಶ್ರೀಕಾಂತ ಪೂಜಾರಿ ಅವರನ್ನು ಬಂಧಿಸಲಾಯಿತು. ಆದರೆ, ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರ ಮೇಲಿರುವ ಹಳೆಯ ಪ್ರಕರಣಕ್ಕೆ ಸಂಬಂಧಿಸಿ ಯಾವ ಕ್ರಮವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿಯ ಕೋಟೆ ಕೆರೆ ಉದ್ಯಾನದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಅಕ್ಕನೊಂದಿಗೆ ಮಾತನಾಡುತ್ತ ಕುಳಿತಿದ್ದ ಹಿಂದು ಸಮುದಾಯದ ತಮ್ಮನನ್ನು ಇತ್ತೀಚೆಗೆ ಥಳಿಸಲಾಗಿದೆ. ಗೋಮಾಂಸ ಸಾಗಾಟ ತಡೆದಿದ್ದರಿಂದ ಹಿಂದು ಕಾರ್ಯಕರ್ತರನ್ನು ಬಂಧಿಸಲಾಗಿದೆ. ದತ್ತಪೀಠಕ್ಕಾಗಿ ಹೋರಾಡಿದ ಕಾರ್ಯಕರ್ತರಿಗೂ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದರು.

ಹಿಂದು ವಿರೋಧಿಯಾಗಿ ವರ್ತಿಸುವುದನ್ನು ರಾಜ್ಯ ಸರ್ಕಾರ ನಿಲ್ಲಿಸಬೇಕು. ಇಲ್ಲದಿದ್ದರೇ ಕಾಂಗ್ರೆಸ್ ‌ಹಠಾವೊ, ಕರ್ನಾಟಕ ಬಚಾವೊ ಆಂದೋಲನ ನಡೆಸಬೇಕಾಗುತ್ತದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಇಡೀ ಹಿಂದು ಸಮುದಾಯ ಕಾಂಗ್ರೆಸ್‌ನಿಂದ ದೂರ ಸರಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ವಿನಯ ಅಂಗ್ರೋಳ್ಳಿ, ವಿಠ್ಠಲ ಗಡ್ಡಿ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.

Share this article