ಬಳ್ಳಾರಿ: ಪ್ಯಾಲಿಸ್ತೇನ್ ಹಾಗೂ ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಬಾಂಬ್ ದಾಳಿಯನ್ನು ಖಂಡಿಸಿ, ಕೂಡಲೇ ಯುದ್ದಕೋರ ದಾಳಿಯನ್ನು ನಿಲ್ಲಿಸುವಂತೆ ಆಗ್ರಹಿಸಿ ಎಸ್‌ಯುಸಿಐಸಿ ಕಾರ್ಯಕರ್ತರು ನಗರದ ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಒಂದು ವರ್ಷದ ಹಿಂದೆ ಹಮಾಸ್ ನಡೆಸಿದ್ದ ದಾಳಿಯನ್ನು ಮುಂದಿಟ್ಟುಕೊಂಡು ಇಸ್ರೇಲ್ ದೇಶವು ಪ್ಯಾಲೇಸ್ತೇನ್ ನ ಗಾಜಾಪಟ್ಟಿ ಮೇಲೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ಸಾಮಾನ್ಯ ಪ್ರಜೆಗಳ ಮೇಲೆ ದಾಳಿ ನಡೆಸುತ್ತಾ ಬಂದಿದೆ. ಆಸ್ಪತ್ರೆ, ಶಾಲೆ, ಮಸೀದಿಗಳನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದೆ. ಇಸ್ರೇಲ್ ಸೇನೆ ದಾಳಿಯಿಂದ ಗಾಜಾಪಟ್ಟಿಯಲ್ಲಿ 42 ಸಾವಿರ ಸಾಮಾನ್ಯ ಜನರು ಸತ್ತಿದ್ದಾರೆ. ಇದರಲ್ಲಿ ಮಹಿಳೆಯರು, ಮಕ್ಕಳು ಸೇರಿದ್ದಾರೆ. ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿ ಸೆ.23ರಿಂದ ಲೆಬನಾನ್ ದೇಶದ ಮೇಲೂ ಇಸ್ರೇಲ್ ಇದೇ ರೀತಿ ದಾಳಿ ನಡೆಸಿದೆ. ಈ ಎರಡೂ ದೇಶಗಳಲ್ಲಿ ಲಕ್ಷಾಂತರ ಜನ ನಿರಾಶ್ರಿತರರಾಗಿದ್ದಾರೆ. ಊಟಕ್ಕಾಗಿ ಹಾಹಾಕಾರವೆದ್ದಿದೆ. ಯುದ್ಧದ ಕ್ರೌರ್ಯದಿಂದ ಮಾನವೀಯತೆ ನಲುಗುತ್ತಿದೆ. ಕೂಡಲೇ ಇಸ್ರೇಲ್ ಈ ಯುದ್ಧ ದಾಳಿ ನಿಲ್ಲಿಸಬೇಕು. ಅಂತಾರಾಷ್ಟ್ರೀಯ ಸಮುದಾಯ ಇಸ್ರೇಲ್ ಮೇಲೆ ಒತ್ತಡ ಹೇರಬೇಕು. ಮೊದಲಿನಿಂದಲೂ ಸಾಮ್ರಾಜ್ಯಶಾಹಿ ವಿರೋಧಿ ಪರಂಪರೆ ಎತ್ತಿ ಹಿಡಿದಿರುವ ಭಾರತ, ಇಸ್ರೇಲ್‌ನ ಆಕ್ರಮಣಕಾರಿ ನೀತಿಯನ್ನು ಖಂಡಿಸಬೇಕು. ಬಾಂಬ್ ದಾಳಿಯನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಎಸ್‌ಯುಸಿಐ ಜಿಲ್ಲಾ ಸಮಿತಿ ಸದಸ್ಯೆ ಡಿ.ನಾಗಲಕ್ಷ್ಮಿ, ಸೋಮಶೇಖರ ಗೌಡ ಮಾತನಾಡಿ, ಅಮೆರಿಕದ ಕುಮ್ಮಕ್ಕಿನಿಂದ ಇಸ್ರೇಲ್ ದೇಶವು ಮೂಲ ನಿವಾಸಿಗಳಾದ ಪ್ಯಾಲಿಸ್ತೇನ್ ದೇಶದ ಜನರನ್ನು ಒಕ್ಕಲೆಬ್ಬಿಸುತ್ತಾ ಬಂದಿದೆ. ಪ್ಯಾಲಿಸ್ತೇನ್ ಹಾಗೂ ಇಸ್ರೇಲ್ ಎರಡು ಪ್ರತ್ಯೇಕ ದೇಶಗಳು ಎಂದು ವಿಶ್ವ ಸಂಸ್ಥೆಯಲ್ಲೇ ಒಪ್ಪಂದವಾಗಿದ್ದರೂ, ಇಸ್ರೇಲ್ ಈ ಒಪ್ಪಂದವನ್ನು ಉಲ್ಲಂಘನೆ ಮಾಡುತ್ತಾ ಬಂದಿದೆ ಎಂದು ಹೇಳಿದರು.ಎಸ್‌ಯುಸಿಐ ಪಕ್ಷದ ಜಿಲ್ಲಾ ಪ್ರಮುಖರಾದ ಡಾ.ಪ್ರಮೋದ್, ಗೋವಿಂದ್, ನಾಗರತ್ನ, ಹನುಮಪ್ಪ, ಈಶ್ವರಿ, ರವಿಕಿರಣ್ ಸೇರಿದಂತೆ ಪಕ್ಷದ ಜಿಲ್ಲಾ ಸಮಿತಿ ಸದಸ್ಯರು ಹಾಗೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.