ಕಾಫಿ ನಾಡಲ್ಲಿ ತಾರಕಕ್ಕೇರಿದ ಕಾಡಾನೆ ಸ್ಥಳಾಂತರ ವಿರೋಧಿ ಹೋರಾಟ

KannadaprabhaNewsNetwork |  
Published : Nov 24, 2026, 12:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರುಹಾಸನ ಜಿಲ್ಲೆಯಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಬಲವಂತವಾಗಿ ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಓಡಿಸುವ ಅರಣ್ಯ ಇಲಾಖೆ ಕ್ರಮದ ವಿರುದ್ಧ ಕಾಫಿನಾಡಿನಲ್ಲಿ ಜನಾಕ್ರೋಶ ತಾರಕಕ್ಕೇರಿದೆ. ಆನೆಗಳ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿ ಜಿಲ್ಲೆಯ ವಿವಿಧೆಡೆ ರೈತರು, ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದರೆ, ಮೂಡಿಗೆರೆಯಲ್ಲಿ ಪಕ್ಷಭೇದ ಮರೆತು ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ ಕುರಿತು ಚರ್ಚಿಸಿದ್ದಾರೆ.

ಶಿರವಾಸೆ, ತರೀಕೆರೆಯಲ್ಲಿ ರಸ್ತೆ ತಡೆದು ಪ್ರತಿಭಟನೆ; ಮೂಡಿಗೆರೆಯಲ್ಲಿ ಸರ್ವಪಕ್ಷಗಳ ಸಭೆ, ಸಾವಿರಾರು ಜನರ ಆಕ್ರೋಶ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಹಾಸನ ಜಿಲ್ಲೆಯಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಬಲವಂತವಾಗಿ ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಓಡಿಸುವ ಅರಣ್ಯ ಇಲಾಖೆ ಕ್ರಮದ ವಿರುದ್ಧ ಕಾಫಿನಾಡಿನಲ್ಲಿ ಜನಾಕ್ರೋಶ ತಾರಕಕ್ಕೇರಿದೆ. ಆನೆಗಳ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿ ಜಿಲ್ಲೆಯ ವಿವಿಧೆಡೆ ರೈತರು, ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದರೆ, ಮೂಡಿಗೆರೆಯಲ್ಲಿ ಪಕ್ಷಭೇದ ಮರೆತು ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ ಕುರಿತು ಚರ್ಚಿಸಿದ್ದಾರೆ.ಚಿಕ್ಕಮಗಳೂರು ತಾಲೂಕಿನ ಶಿರವಾಸೆ-ಮಲ್ಲಂದೂರು-ಹೊನ್ನಾಳ ರಸ್ತೆಯಲ್ಲಿ ವಿವಿಧ ಕನ್ನಡಪರ ಹಾಗೂ ರೈತ ಸಂಘಟನೆ ಗಳ ನೇತೃತ್ವದಲ್ಲಿ ನೂರಾರು ಹೋರಾಟಗಾರರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಭದ್ರಾ ಅಭಯಾರಣ್ಯಕ್ಕೆ ಹಾಸನ ಜಿಲ್ಲೆಯ ಆನೆಗಳನ್ನು ಸ್ಥಳಾಂತರಿಸುವ ಕ್ರಮಕೈಬಿಡಬೇಕು ಎಂದು ಆಗ್ರಹಿಸಿ ಘೋಷಣೆ ಕೂಗಿದರು. ಆನೆಗಳ ಸ್ಥಳಾಂತರ ದಿಂದ ಈಗಾಗಲೇ ಕಾಡಾನೆಗಳ ಹಾವಳಿಯಿಂದ ಸಂಕಷ್ಟ ಅನುಭವಿಸುತ್ತಿರುವ ಮಲೆನಾಡಿನ ಜನರಿಗೆ ಮತ್ತಷ್ಟು ತೊಂದರೆ ಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರಸ್ತೆ ತಡೆಯಿಂದ ಕೆಲಕಾಲ ವಾಹನ ಸಂಚಾರ ಸ್ಥಗಿತವಾಗಿ ವಾಹನ ಸವಾರರು ಹಾಗೂ ಪ್ರವಾಸಿಗರು ಪರದಾಡು ವಂತಾ ಯಿತು. ಸ್ಥಳಾಂತರದ ನಿರ್ಧಾರವನ್ನು ಕೈಬಿಡದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಇನ್ನೊಂದೆಡೆ, ತರೀಕೆರೆ ತಾಲೂಕಿನ ಲಿಂಗದಹಳ್ಳಿ ಹೋಬಳಿಯಲ್ಲಿ ಕಾಡಾನೆ ಸಾಫ್ಟ್ ರಿಲೀಸ್ ಕೇಂದ್ರ ಸ್ಥಾಪಿಸುವ ಪ್ರಸ್ತಾಪದ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು. ಮಾಜಿ ಶಾಸಕ ಸುರೇಶ್ ನೇತೃತ್ವದಲ್ಲಿ ತರೀಕೆರೆ ಪಟ್ಟಣದ ಸಾಲುಮರದಮ್ಮ ದೇವಸ್ಥಾನದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಸಾವಿರಾರು ಜನರು ಪಾಲ್ಗೊಂಡು ಪ್ರಸ್ತಾವಿತ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.ಲಿಂಗದಹಳ್ಳಿ ಹೋಬಳಿ ಗಂಗೂರು, ಬಳ್ಳಾವರ, ಉಡೇವಾ ಹಾಗೂ ಕೃಷ್ಣಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಾನೆ ಸಾಫ್ಟ್ ರಿಲೀಸ್ ಕೇಂದ್ರ ಸ್ಥಾಪಿಸಲು ಚಿಂತನೆ ನಡೆಸಲಾಗುತ್ತಿದೆ. ಇದಕ್ಕಾಗಿ ಸುಮಾರು 2,700 ಎಕರೆ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿ, ಡೀಮ್ಡ್ ಫಾರೆಸ್ಟ್ ಆಗಿ ಪರಿವರ್ತಿಸಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನವಸತಿ ಹಾಗೂ ಕೃಷಿ ಪ್ರದೇಶಗಳ ಮೇಲೆ ಇದರ ಪರಿಣಾಮ ಉಂಟಾಗುವ ಆತಂಕವಿದ್ದು, ಸಾಫ್ಟ್ ರಿಲೀಸ್ ಕೇಂದ್ರ ಸ್ಥಾಪನೆಯ ಪ್ರಸ್ತಾಪ ಕೈಬಿಡಬೇಕು ಎಂದು ಒತ್ತಾಯಿಸಿದರು.ಮೂಡಿಗೆರೆಯಲ್ಲಿ ಸರ್ವಪಕ್ಷಗಳ ಸಭೆ: ಈ ನಡುವೆ, ಕಳೆದ ಎರಡು ದಿನಗಳಿಂದ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದ ಕಾಫಿ ತೋಟದಲ್ಲಿ 40ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೀಡುಬಿಟ್ಟಿದೆ. ಆನೆಗಳ ಗುಂಪು ಕಾರ್ಬೈಲ್ ಗ್ರಾಮದ ಕಡೆಗೆ ಚಲಿಸುತ್ತಿದ್ದು, ಕಾಫಿ ತೋಟಗಳಲ್ಲಿ ಓಡಾಡುತ್ತಿರುವ ಆನೆಗಳ ಚಲನವಲನದ ಮೇಲೆ ಅರಣ್ಯ ಇಲಾಖೆ ತೀವ್ರ ನಿಗಾ ಇರಿಸಿದೆ. ಥರ್ಮಲ್ ಡ್ರೋನ್ ಬಳಸಿ ಆನೆಗಳ ಚಲನವಲನ ಗಮನಿಸಲಾಗುತ್ತಿದೆ. ಅವು ಜನವಸತಿ ಪ್ರದೇಶಗಳತ್ತ ತೆರಳ ದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಮೂಡಿಗೆರೆ ಅರಣ್ಯ ಸಿಬ್ಬಂದಿ ಸ್ಥಳದಲ್ಲೇ ಕಣ್ಗಾವಲು ಕಾಯುತ್ತಿದ್ದಾರೆ.ಆನೆಗಳ ಸ್ಥಳಾಂತರದ ವಿಚಾರವಾಗಿ ಮೂಡಿಗೆರೆ ಪ್ರವಾಸಿ ಮಂದಿರದಲ್ಲಿ ಪಕ್ಷಭೇದ ಮರೆತು ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸಭೆ ನಡೆಸಿದರು. ಪರಿಷತ್ ಮಾಜಿ ಸಭಾಪತಿ ಎಂ.ಕೆ. ಪ್ರಾಣೇಶ್, ರೈತ ಸಂಘದ ಮುಖಂಡರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸ್ಥಳೀಯರು ಸಭೆಯಲ್ಲಿ ಭಾಗವಹಿಸಿದ್ದರು. ಮೂಡಿಗೆರೆ ಭಾಗಕ್ಕೆ ಬಂದಿರುವ ಆನೆಗಳನ್ನು ಕೂಡಲೇ ವಾಪಸ್ ಹಿಮ್ಮೆಟ್ಟಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು. ಆನೆಗಳನ್ನು ವಾಪಸ್ ಕಳುಹಿಸುವ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಹೋರಾಟ ರೂಪಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೃಜನತ್ಮಕ ಸಾಧ್ಯತೆಗಳ ಗುರುತಿಸಿ ಮುನ್ನಡೆಯಿರಿ
ಖಂಡೇರಾಯನಪಲ್ಲಿಯಲ್ಲಿ ವಿದ್ಯುತ್‌ ಉಪಕೇಂದ್ರ ಉದ್ಘಾಟನೆ