ಕನಕಪುರ: ಗ್ರಾಹಕರು ಚಿನ್ನ ಅಡವಿಟ್ಟು ತೆಗೆದುಕೊಂಡಿದ್ದ ಸಾಲ ತೀರಿಸಿದ್ದರೂ ಅಡಮಾನ ಇಟ್ಟಿರುವ ಚಿನ್ನಾಭರಣ ಕೊಡದೆ ಬ್ಯಾಂಕಿನ ಸಿಬ್ಬಂದಿ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಹಕರು ಬ್ಯಾಂಕಿನ ಮುಂದೆ ಧರಣಿ ನಡೆಸಿದರು.
ನಗರದ ರೈತ ಸೇವಾ ಸಹಕಾರ ಸಂಘದಲ್ಲಿ ತಾವು ಒತ್ತೆ ಇಟ್ಟಿರುವ ಚಿನ್ನಾಭರಣ ಹಾಗೂ ಡಿಪಾಸಿಟ್ ಹಣವನ್ನು ಕೊಡುತ್ತಿಲ್ಲವೆಂದು ಗ್ರಾಹಕರು ಆರೋಪಿಸಿ ಬ್ಯಾಂಕಿನ ಮುಂದೆ ಧರಣಿ ಕುಳಿತ ಪ್ರತಿಭಟನಾಕಾರರು ರೈತ ಸೇವಾ ಸಹಕಾರ ಸಂಘ ಉತ್ತಮ ವಹಿವಾಟು ನಡೆಸುತ್ತಿದ್ದಾಗ ಸದಸ್ಯರು ಮತ್ತು ಗ್ರಾಹಕರು ಹೆಚ್ಚಿನ ಬಡ್ಡಿ ಆಸೆಗಾಗಿ ಲಕ್ಷಾಂತರ ರುಪಾಯಿ ಡಿಪಾಸಿಟ್ ಇಟ್ಟಿದ್ದಾರೆ. ಸುಲಭವಾಗಿ ಚಿನ್ನಾಭರಣ ಸಾಲ ಕೊಡುತ್ತಿದ್ದರಿಂದ ತಾಲೂಕಿನ ರೈತರು ಚಿನ್ನಾಭರಣ ಸಾಲ ಪಡೆದಿದ್ದರು. ಕೆಲವು ವರ್ಷಗಳ ಹಿಂದೆ ಬ್ಯಾಂಕಿನ ವ್ಯವಸ್ಥಾಪಕ ಮಾಡಿರುವ ವಂಚನೆಯಿಂದ ಗ್ರಾಹಕರಿಗೆ ಚಿನ್ನಾಭರಣವನ್ನಾಗಲಿ, ಡಿಪಾಸಿಟ್ ಇಟ್ಟಿದ್ದ ಹಣವನ್ನು ಕೊಡದೆ ನಮಗೆ ವಂಚನೆ ಮಾಡುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.ತಾವು ಪಡೆದಿರುವ ಚಿನ್ನಾಭರಣ ಸಾಲ ಸಂಪೂರ್ಣವಾಗಿ ಬಡ್ಡಿ ಸಮೇತ ಕಟ್ಟಿದ್ದೇವೆ. ಆದರೆ ನಮಗೆ ಚಿನ್ನಾಭರಣ ಕೊಡುತ್ತಿಲ್ಲ, ಮಕ್ಕಳ ಮದುವೆಗೆ ಮತ್ತು ವಯಸ್ಸಾದ ಕಾಲದಲ್ಲಿ ಸಹಾಯಕ್ಕೆ ಬರಲಿ ಎಂದು ಡಿಪಾಸಿಟ್ ಇಟ್ಟಿದ್ದೇವೆ. ಅವಧಿ ಮುಗಿದರೂ ನಮಗೆ ಹಣ ನೀಡುತ್ತಿಲ್ಲವೆಂದು ಪ್ರತಿಭಟನಾನಿರತರು ಸೊಸೈಟಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಸೊಸೈಟಿ ಆಗಿರುವುದರಿಂದ ಸೊಸೈಟಿ ಬೆಳೆಯಲಿ ಮತ್ತು ಆಡಳಿತ ಮಂಡಳಿಯವರ ಮೇಲಿನ ವಿಶ್ವಾಸದಿಂದ ಇಲ್ಲಿ ವ್ಯವಹಾರ ನಡೆಸಿದ್ದೇವೆ. ಆಡಳಿತ ಮಂಡಳಿ ಬ್ಯಾಂಕಿನಲ್ಲಿ ವಂಚನೆ ಆಗದಂತೆ ಜವಾಬ್ದಾರಿ ವಹಿಸಿ ನಮ್ಮ ಹಣ ಮತ್ತು ಚಿನ್ನಾಭರಣ ಕೊಡದೆ ವಂಚನೆ ಆಗಿದೆ ಎಂದು ಸೊಸೈಟಿಯ ಆಡಳಿತ ಮಂಡಳಿಯವರು ನಮಗೆ ಮೋಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಹಕಾರ ಇಲಾಖೆ ಮತ್ತು ಸರ್ಕಾರ ಮಧ್ಯಪ್ರವೇಶಿಸಿ ನಮ್ಮ ಹಣ ಮತ್ತು ಚಿನ್ನ ನಮಗೆ ಕೊಡಿಸಬೇಕು. ಇಲ್ಲವಾದಲ್ಲಿ ಇಲ್ಲಿ ಪ್ರತಿಭಟನೆಗೆ ಬಂದಿರುವಂತಹ ಎಲ್ಲರೂ ಸಾಮೂಹಿಕವಾಗಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಬ್ಯಾಂಕಿನ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಸುರೇಂದ್ರ ಪ್ರತಿಭಟನಾನಿರತ ಗ್ರಾಹಕರನ್ನು ಉದ್ದೇಶಿಸಿ ಮಾತನಾಡಿ ಬಿಡಿಸಿಸಿ ಬ್ಯಾಂಕಿನಲ್ಲಿ ನಮ್ಮ ಸೊಸೈಟಿಯ ಭದ್ರತಾ ಠೇವಣಿ ಹಣವಿದೆ. ಪೊಲೀಸ್ ಠಾಣೆಯಲ್ಲಿ ಚಿನ್ನಾಭರಣಗಳಿದ್ದು ಅವುಗಳನ್ನು ರಿಲೀಸ್ ಮಾಡಿಕೊಡುವಂತೆ ಮನವಿ ಮಾಡಿದ್ದೇವೆ. ಈ ಸಂಬಂಧ ಇದೇ ತಿಂಗಳ ಕೊನೆಯಲ್ಲಿ ಆಡಳಿತ ಮಂಡಳಿ ಸಭೆ ನಡೆಸಿ ನಮ್ಮಲ್ಲಿರುವ ಹಣ ಮತ್ತು ಒಡವೆಗಳಿಂದ ಯಾರಿಗೆ ಎಷ್ಟು ಹಣ ಮತ್ತು ಒಡವೆಗಳನ್ನು ಶೇಕಡವಾರು ನೀಡಬಹುದೆಂದು ಚರ್ಚಿಸಿ, ಇಲಾಖೆಯ ಉನ್ನತ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಗ್ರಾಹಕರಿಗೆ ವಿತರಣೆ ಮಾಡಲಾಗುವುದು ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಬ್ಯಾಂಕಿನ ಗ್ರಾಹಕರೊಂದಿಗೆ ವಿವಿಧ ಸಂಘಟನೆಗಳ ಹೋರಾಟಗಾರರು, ರೈತ ಮುಖಂಡರು ಪಾಲ್ಗೊಂಡಿದ್ದರು.
(ಫೋಟೋ ಕ್ಯಾಫ್ಷನ್)