ಕನ್ನಡಪ್ರಭ ವಾರ್ತೆ ಕೊಪ್ಪಳ
ಮಕ್ಕಳಿಗೆ ಅನುಕೂಲವಾಗಿರುವ ಮತ್ತು ಮಕ್ಕಳ ಭವಿಷ್ಯಕ್ಕಾಗಿ ಐಸಿಡಿಎಸ್ ಯೋಜನೆ ಮುಂದುವರೆಸಬೇಕು ಎಂದು ಆಗ್ರಹಿಸಿ ಅಂಗನವಾಡಿ ನೌಕರರು ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಅಧೀನದಡಿ ಎಲ್‌ಕೆಜಿ, ಯುಕೆಜಿ ಆರಂಭಿಸಿದೆ. ಅಲ್ಲಿ ಮಕ್ಕಳು ದಾಖಲಾದರೆ ಕ್ರಮೇಣ ಅಂಗನವಾಡಿಗೆ ಅನುದಾನ ಕೊಡುವುದು ಕಡಿಮೆಯಾಗಲಿದೆ. ಇದರಿಂದ ಸರ್ಕಾರವು ಈ ಹಿಂದೆ ರೂಪಿಸಿರುವ ಐಸಿಡಿಎಸ್ ಯೋಜನೆಯು ಸಂಪೂರ್ಣ ನಿಲ್ಲುವ ಸಾಧ್ಯತೆ ಇದೆ. ನಾವು ಮಕ್ಕಳ ಆರೋಗ್ಯ ಕಾಪಾಡುತ್ತಿದ್ದೇವೆ. ಆದರೆ ಶಿಕ್ಷಣ ಇಲಾಖೆಯಲ್ಲಿ ಮಕ್ಕಳಿಗೆ ಇಂಗ್ಲಿಷ್ ವರ್ಣಮಾಲೆ ಹೇಳಿಕೊಡುತ್ತಾರೆ. ಆದರೆ ಅವರ ಅಪೌಷ್ಠಿಕತೆಯ ಬಗ್ಗೆ ಗಮನ ಹರಿಸುವುದಿಲ್ಲ. ಇದು ಮಕ್ಕಳ ಆರೋಗ್ಯದ ಕುಂಠಿತಕ್ಕೆ ಕಾರಣವಾಗಲಿದೆ. ಸರ್ಕಾರವು ಇದನ್ನು ಅವಲೋಕಿಸಬೇಕು ಎಂದು ನೌಕರರು ಎಚ್ಚರಿಸಿದರು.
ಸರ್ಕಾರವು ಎಲ್‌ಕೆಜಿ, ಯುಕೆಜಿಗೆ ಪಿಯುಸಿ, ಡಿಇಡಿ ಪೂರೈಸಿದ ಶಿಕ್ಷಕರನ್ನು ಅತಿಥಿ ಶಿಕ್ಷಕರನ್ನಾಗಿ ನೇಮಿಸಲು ಸೂಚಿಸಿದೆ. ಆದರೆ ಈಗಿನ ಯುವಕ, ಯುವತಿಯರು 30 ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಅಂಗನವಾಡಿ ನೌಕರರು ಸಹ ಪಿಯುಸಿ, ಪದವಿ ಸೇರಿ ಸ್ನಾತಕೋತ್ತರ ಪದವಿ ಪಡೆದವರಿದ್ದಾರೆ. ಅವರಲ್ಲಿ ತಾಯಿ-ಮಗುವಿನ ಬಾಂಧವ್ಯವಿದೆ. ಶಿಕ್ಷಣ ಇಲಾಖೆಗೆ ಇಂಥಹ ಜವಾಬ್ದಾರಿ ಕೊಡುವುದರಿಂದ ತುಂಬ ಸಮಸ್ಯೆಯಾಗಲಿದೆ. ಮೊದಲೇ ಶಿಕ್ಷಣ ಇಲಾಖೆಯಲ್ಲಿ 36 ಸಾವಿರ ಶಿಕ್ಷಕರ ಕೊರತೆಯಿದೆ. ಶಾಲಾ ಕಟ್ಟಡಗಳು ಸರಿಯಾಗಿಲ್ಲ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂದು ಒತ್ತಾಯಿಸಿದರು.ಕೆಕೆಆರ್‌ಡಿಬಿ ಯೋಜನೆಯಡಿ ಹೊಸದಾಗಿ ಆರಂಭಿಸಿರುವ ಎಲ್‌ಕೆಜಿ, ಯುಕೆಜಿ ಶಾಲೆಗಳ ಪ್ರಾರಂಭ ಯೋಜನೆ ತಕ್ಷಣ ನಿಲ್ಲಿಸಬೇಕು. ಪ್ರಸ್ತುತ ಕೆಕೆಆರ್‌ಡಿಬಿಯಲ್ಲಿ ಹಣವಿದೆ. ಆದರೆ ಮುಂದಿನ ದಿನಗಳಲ್ಲಿ ಹಣದ ಕೊರತೆ ಎದುರಾದಾಗ ಈ ಯೋಜನೆಗಳಿಗೆ ತೊಂದರೆಯಾಗಲಿದೆ. 1008 ಅಂಗನವಾಡಿ ಕೇಂದ್ರಗಳನ್ನು ಗುರುತು ಮಾಡಿ ಅಲ್ಲಿಯೇ ಎಲ್‌ಕೆಜಿ, ಯುಕೆಜಿ ಆರಂಭಿಸಲು ಮುಂದಾಗಬೇಕು. ಈಗಾಗಲೇ ಶಿಕ್ಷಣ ಇಲಾಖೆಯಲ್ಲಿರುವ ಎಲ್‌ಕೆಜಿ-ಕೆಪಿಎಸ್ ವರೆಗಿನ ಶಾಲೆಗಳಲ್ಲಿ ಮಕ್ಕಳ ಅಧ್ಯಯನದ ಬಗ್ಗೆ ವರದಿ ಪಡೆಯಬೇಕು. ಐಸಿಡಿಎಸ್‌ನಲ್ಲಿರುವ ಮಕ್ಕಳ ಸ್ಥಿತಿಗತಿಯ ವರದಿ ಪಡೆಯಬೇಕು. ಮಕ್ಕಳ ಸ್ಥಿತಿಗತಿ ಅಧ್ಯಯನ ಮಾಡಲು ಮಕ್ಕಳ ತಜ್ಞರು, ಮಕ್ಕಳ ವೈದ್ಯರು, ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ತಜ್ಞರು ಹಾಗೂ ಸಂಘದ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸಿ ಅಧ್ಯಯನ ಮಾಡಬೇಕು. ಈ ವರದಿ ಬರುವವರೆಗೂ ಶಿಕ್ಷಣ ಇಲಾಖೆಯು ಯೋಜನೆ ಆರಂಭಿಸದಂತೆ ಸರ್ಕಾರವು ಸೂಚನೆ ನೀಡಬೇಕು. ಶಿಕ್ಷಣ ಇಲಾಖೆ ಏನೇ ಬದಲಾವಣೆ ತರುವಾಗ ಡಬ್ಲ್ಯೂಸಿಒ ಇಲಾಖೆಯ ಒಪ್ಪಿಗೆ ಪಡೆಯಬೇಕು. ಈ ಮೂಲಕ ಐಸಿಡಿಎಸ್ ಯೋಜನೆಯನ್ನು ಕಾಪಾಡಬೇಕು ಎಂದು ಒತ್ತಾಯಿಸಲಾಯಿತು.
ವಿ.ಎಲ್. ಶಿವಣ್ಣ, ತುಕರಾಮ ಪಾತ್ರೋಟಿ, ಚನ್ನಮ್ಮ ಕುಕನೂರು, ಎಂ.ಎಸ್. ಬೇಗಂ, ಶಿವಮ್ಮ ಹುಡೇದ ಇದ್ದರು.