ವಕ್ಫ್ ಅಧಿಸೂಚನೆ ಹಿಂಪಡೆಯುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

KannadaprabhaNewsNetwork |  
Published : Nov 05, 2024, 12:46 AM IST
೪ಕೆಎಂಎನ್‌ಡಿ-೨ವಕ್ಫ್ ಅಧಿಸೂಚನೆ ಹಿಂಪಡೆಯುವಂತೆ ಒತ್ತಾಯಿಸಿ ಬಿಜೆಪಿ ಮುಖಂಡರು-ಕಾರ್ಯಕರ್ತರು ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕೇಂದ್ರದ ಸರ್ಕಾರ ದೇಶದ ಜನತೆಯ ಹಿತದೃಷ್ಟಿಯಿಂದ ಹಾಗೂ ವಕ್ಪ್ ಮಂಡಳಿಯಿಂದ ಆಗುತ್ತಿರುವ ಅಕ್ರಮಗಳ ಹಿನ್ನೆಲೆಯಲ್ಲಿ ವಕ್ಫ್ ಕಾಯಿದೆಗೆ ತಿದ್ದುಪಡಿ ತರುವ ವಿಧೇಯಕ ಮಂಡಿಸಿ, ಜಂಟಿ ಪಾರ್ಲಿಮೆಂಟರಿ ಬೋರ್ಡ್‌ನ ಪರಿಶೀಲನೆಯಲ್ಲಿದೆ. ಈ ತಿದ್ದುಪಡಿ ಜಾರಿಯಾಗುವುದು ಬಹುತೇಕ ಖಚಿತವಾಗುತ್ತಿದ್ದಂತೆ ವಕ್ಫ್ ಬೋರ್ಡ್ ತನ್ನ ಕರಾಳ ಕೈಚಳಕ ಮಾಡುವ ಮೂಲಕ ಇಡೀ ದೇಶದಲ್ಲಿ ಸಾರ್ವಜನಿಕ ಆಸ್ತಿಯನ್ನು ಕಬಳಿಸುವ ಹುನ್ನಾರಕ್ಕೆ ಕೈ ಹಾಕಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ವಕ್ಫ್ ಮಂಡಳಿಯ ಮೂಲಕ ರೈತರನ್ನು ಆತಂಕದ ಸ್ಥಿತಿಗೆ ತಳ್ಳುತ್ತಿದ್ದು, ತಕ್ಷಣವೇ ೧೯೭೪ರ ವಕ್ಫ್ ಅಧಿಸೂಚನೆ ಹಿಂಪಡೆಯುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸೇರಿದ ಕಾರ್ಯಕರ್ತರು ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್‌ಎಸ್.ಇಂದ್ರೇಶ್ ಮಾತನಾಡಿ, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಜನತೆಯ ಹಿತದೃಷ್ಟಿಯಿಂದ ಹಾಗೂ ವಕ್ಪ್ ಮಂಡಳಿಯಿಂದ ಆಗುತ್ತಿರುವ ಅಕ್ರಮಗಳ ಹಿನ್ನೆಲೆಯಲ್ಲಿ ವಕ್ಫ್ ಕಾಯಿದೆಗೆ ತಿದ್ದುಪಡಿ ತರುವ ವಿಧೇಯಕ ಮಂಡಿಸಿ, ಜಂಟಿ ಪಾರ್ಲಿಮೆಂಟರಿ ಬೋರ್ಡ್‌ನ ಪರಿಶೀಲನೆಯಲ್ಲಿದೆ. ಈ ತಿದ್ದುಪಡಿ ಜಾರಿಯಾಗುವುದು ಬಹುತೇಕ ಖಚಿತವಾಗುತ್ತಿದ್ದಂತೆ ವಕ್ಫ್ ಬೋರ್ಡ್ ತನ್ನ ಕರಾಳ ಕೈಚಳಕ ಮಾಡುವ ಮೂಲಕ ಇಡೀ ದೇಶದಲ್ಲಿ ಸಾರ್ವಜನಿಕ ಆಸ್ತಿಯನ್ನು ಕಬಳಿಸುವ ಹುನ್ನಾರಕ್ಕೆ ಕೈ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲೂ ಸಹ ಇಂತಹ ಎಲ್ಲಾ ಕುಕೃತ್ಯಗಳಿಗೂ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ಜಮೀರ್ ಅಹಮದ್ ನೇರವಾಗಿ ಕುಮ್ಮಕ್ಕು ಕೊಡುತ್ತಿರುವ ಇಡೀ ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಮಾತನಾಡಿ, ವಕ್ಫ್ ಬೋರ್ಡ್‌ನಿಂದ ಆಗುತ್ತಿರುವ ಗೊಂದಲಗಳು ರಾಜ್ಯದಲ್ಲಿ ಸಾಮರಸ್ಯ ಹದಗೆಡುವುದಕ್ಕೆ ಕಾರಣವಾಗಿದೆ. ಸರ್ಕಾರ ವಿವೇಚನೆಯಿಲ್ಲದೆ ಕೈಗೊಳ್ಳುತ್ತಿರುವ ನಿರ್ಧಾರಗಳಿಂದ ರಾಜ್ಯದ ಅನೇಕ ಆಸ್ತಿಗಳ ವ್ಯಾಜ್ಯ ಬೀದಿಗೆ ಬರುತ್ತಿದೆ. ಈಗಾಗಲೇ ಕಡಕೋಳದಲ್ಲಿ ಎರಡು ಕೋಮುಗಳ ನಡುವೆ ಸಂಘರ್ಷ ಪ್ರಾರಂಭವಾಗಿದೆ. ಇದು ಇಡೀ ರಾಜ್ಯವನ್ನೇ ವ್ಯಾಪಿಸುವ ಸಾಧ್ಯತೆ ಇದ್ದು, ರಾಜ್ಯದ ರೈತರ ಹಿತದೃಷ್ಟಿಯಿಂದ ನಿಲುವನ್ನು ತೆಗೆದುಕೊಳ್ಳಬೇಕಿದ್ದ ಸಿದ್ದರಾಮಯ್‌ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸುವ ದೃಷ್ಟಿಯಿಂದ ಸಂಪೂರ್ಣವಾಗಿ ಅವರ ಪರ ನಿಂತಿದೆ ಎಂದು ಆರೋಪಿಸಿದರು.

ಬೂದನೂರು ಗ್ರಾಮದ ೧.೧೩ ಎಕರೆ ಜಮೀನನ್ನು ವಕ್ಫ್ ಆಸ್ತಿಯನ್ನಾಗಿ ಮಾಡಲಾಗಿದೆ. ಈ ಜಮೀನು ಹೆದ್ದಾರಿಗೆ ಭೂಸ್ವಾಧೀನವಾಗಿ ಅದರಿಂದ ಬಂದ ೩೭ ಲಕ್ಷಕ್ಕೂ ಹೆಚ್ಚು ಪರಿಹಾರ ಹಣವನ್ನು ವಕ್ಫ್ ಮಂಡಳಿಗೆ ಜಮಾ ಮಾಡಲಾಗಿದೆ. ಶೆಟ್ಟಿಹಳ್ಳಿ ಅರಣ್ಯ ಪ್ರದೇಶವನ್ನೂ ವಕ್ಫ್ ಆಸ್ತಿಗೆ ಅಧಿಕಾರಿಗಳು ಖಾತೆ ಮಾಡಿದ್ದಾರೆ. ಬೆಳ್ಳೂರಿನಲ್ಲಿ ೬೦ ಎಕರೆ ರೈತರ ಜಮೀನು ವಕ್ಫ್ ಆಸ್ತಿ ಎಂದು ನೋಟಿಸ್ ನೀಡಲಾಗಿದೆ. ರೈತರು ತಮ್ಮ ಆರ್‌ಟಿಸಿಯ ಕಾಲಂ ೯ ಮತ್ತು ೧೧ನ್ನು ತಕ್ಷಣವೇ ಪರಿಶೀಲಿಸಿ ಅದರಲ್ಲಿ ಯಾವ ಹೆಸರು ನಮೂದಾಗಿದೆ ಎಂಬುದನ್ನು ನೋಡಿಕೊಳ್ಳಿ, ಈ ಬಗ್ಗೆ ಅಧಿಕಾರಿಗಳ ಬಳಿ ಸರಿಪಡಿಸಿಕೊಳ್ಳಿ, ಒಂದು ಬಾರಿ ವಕ್ಫ್ ಆಸ್ತಿ ಎಂದು ನಮೂದಾದರೆ ಅದನ್ನು ಮತ್ತೆ ವಾಪಸ್ಸು ಪಡೆಯುವುದು ಅಸಾಧ್ಯದ ಕೆಲಸ. ವಕ್ಫ್ ನ್ಯಾಯ ಮಂಡಳಿಯಲ್ಲೇ ಪರಿಹರಿಸಿಕೊಳ್ಳಬೇಕಾಗುತ್ತದೆ. ಅಲ್ಲಿರುವವರೆಲ್ಲರೂ ಮುಲ್ಲಾಗಳೇ ಆಗಿದ್ದಾರೆ. ಅವರಿಂದ ಯಾವ ನ್ಯಾಯವೂ ಸಿಗುವುದಿಲ್ಲ. ಹಾಗಾಗಿ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಹಾಗಾಗಿ ತಕ್ಷಣವೇ ಜನಪ್ರತಿನಿಧಿಗಳು, ಸರ್ಕಾರ ಈ ಬಗ್ಗೆ ಗಮನಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಸೆಟೆದೆದ್ದು ಪ್ರತಿ ಮನೆಯಿಂದಲೂ ಹೋರಾಟಕ್ಕೆ ಧುಮುಕಬೇಕು ಎಂದು ಮನವಿ ಮಾಡಿದರು.

ಸಿಎಂ ಸಿದ್ದರಾಮಯ್ಯ ಅಧಿಕಾರಿಗಳ ಸಭೆ ನಡೆಸಿ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ಎಂಬುದಾಗಿ ನಮೂದು ಮಾಡುವಂತೆ ತಾತ್ಕಾಲಿಕವಾಗಿ ತಡೆಹಿಡಿದಿರುವುದು ಕೇವಲ ಚುನಾವಣೆಯ ತಂತ್ರಗಾರಿಕೆ. ಬಿಜೆಪಿಯು ಈ ತಂತ್ರಗಾರಿಕೆಯನ್ನು ಒಪ್ಪುವುದಿಲ್ಲ. ಮುಂದಿನ ದಿನಗಳಲ್ಲಿ ರೈತರಿಗೆ ಇದು ಮರಣಶಾಸನವಾಗಿಯೇ ಮುಂದುವರಿಯಲಿದೆ. ಇಂತಹ ಕೃತ್ಯಗಳನ್ನು ಮುಂದುವರಿಸಿದಲ್ಲಿ ಸರ್ಕಾರದ ವಿರುದ್ಧ ಇಡೀ ರಾಜ್ಯದ ಜನತೆ ಒಗ್ಗೂಡಿಸಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನರಸಿಂಹಾಚಾರ್, ನಾಗಾನಂದ, ಶಿವಕುಮಾರ ಆರಾಧ್ಯ, ವಿವೇಕ್, ಧನಂಜಯ, ನಿತ್ಯಾನಂದ, ನಂದೀಶ್, ಎಂ.ಬಿ.ರಮೇಶ, ವಸಂತ್, ಶಿವಣ್ಣ, ಆನಂದ, ನಾಗರಾಜು, ಶಿವನಂಜೇಗೌಡ, ನಾಗಪ್ಪ, ರಾಮೇಗೌಡ, ಸಿ.ಟಿ. ಮಂಜುನಾಥ್, ನಾಗಣ್ಣ ಮಲ್ಲಪ್ಪ, ನವೀನ್‌ಕುಮಾರ್, ಪ್ರಸನ್ನಕುಮಾರ್, ಬಸವರಾಜು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌