ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟನೆ

KannadaprabhaNewsNetwork | Published : Mar 14, 2024 2:05 AM

ಸಾರಾಂಶ

ಅಣೆಕಟ್ಟೆಗೆ ನೀರು ಬರುವ ವೇಳೆ ಅಣೆಕಟ್ಟೆಯಲ್ಲಿ ನೀರನ್ನು ಶೇಖರಣೆ ಮಾಡಿದೆ. ತಮಿಳುನಾಡು ನೀರು ಕೇಳುವ ಮೊದಲೇ ರಾಜ್ಯ ಸರ್ಕಾರ ಬಂದ ನೀರನ್ನು ಬಿಡಲು ಪ್ರಾರಂಭಿಸಿದ್ದರಿಂದ ಇಂದು ಅಣೆಕಟ್ಟೆ ಬರಿದಾಗಿದೆ. ಅಣೆಕಟ್ಟೆ ನೀರನ್ನು ನಂಬಿ ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಒಣಗುತ್ತಿದ್ದು, ಅದನ್ನು ನೋಡಲು ಸಾಧ್ಯವಾಗದೆ ಆತಂಕದಲ್ಲಿ ಬದುಕುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೆಆರ್‌ಎಸ್ ಜಲಾಶಯದ ಅಚ್ಚುಕಟ್ಟು ಪ್ರದೇಶದ ಎಲ್ಲಾ ನಾಲೆಗಳ ಮೂಲಕ ನೀರು ಹರಿಸಿ ಜನ-ಜಾನುವಾರುಗಳಿಗೆ ನೆರವಾಗುವಂತೆ ಒತ್ತಾಯಿಸಿ ಭೂಮಿ ತಾಯಿ ಹೋರಾಟ ಸಮಿತಿ ಸದಸ್ಯರು ಹೆದ್ದಾರಿ ತಡೆದು ಬುಧವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ, ರೈತ ಹೋರಾಟಗಾರ ಕೆ.ಎಸ್ ನಂಜುಂಡೇಗೌಡ ನೇತೃತ್ವದಲ್ಲಿ ನೂರಾರು ರೈತರು ಸೇರಿದ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ ಕೆಲ ಕಾಲ ರಸ್ತೆ ತಡೆ ನಡೆಸಿದರು.

ನಂತರ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ರೈತರಿಗೆ ಅನುಕೂಲ ಮಾಡಿಕೊಡಿ ಎಂಬ ಉದ್ದೇಶದಿಂದ ಸ್ಥಳೀಯವಾಗಿ ಶಾಸಕರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಆದರೆ, ಜಿಲ್ಲೆಯ 7 ಜನ ಶಾಸಕರ ಧ್ವನಿ, ಹೋರಾಟ ಸತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಶಾಸಕರುಗಳು ರೈತರ ಪರವಾಗಿ ನಿಲ್ಲದೆ ಮಂತ್ರಿಗಳ ಬಳಿ ತಲೆ ಕೆರೆದುಕೊಂಡು ಜಿಲ್ಲೆಯ ಸ್ವಾಭಿಮಾನವನ್ನು ರಾಜ್ಯ ಸರ್ಕಾರಕ್ಕೆ ಒತ್ತೆ ಇಟ್ಟಿದ್ದಾರೆ. ಸರ್ಕಾರವನ್ನು ಆಳುತ್ತಿರುವವರು ಪಕ್ಷಕ್ಕೆ ಒತ್ತೆಯಿಟ್ಟು ನಮ್ಮೆಲ್ಲರ ಭವಿಷ್ಯವನ್ನು ಬೀದಿಗೆ ತಂದಿದ್ದಾರೆ ಎಂದು ಕಿಡಿಕಾರಿದರು.

ಅಣೆಕಟ್ಟೆಗೆ ನೀರು ಬರುವ ವೇಳೆ ಅಣೆಕಟ್ಟೆಯಲ್ಲಿ ನೀರನ್ನು ಶೇಖರಣೆ ಮಾಡಿದೆ. ತಮಿಳುನಾಡು ನೀರು ಕೇಳುವ ಮೊದಲೇ ರಾಜ್ಯ ಸರ್ಕಾರ ಬಂದ ನೀರನ್ನು ಬಿಡಲು ಪ್ರಾರಂಭಿಸಿದ್ದರಿಂದ ಇಂದು ಅಣೆಕಟ್ಟೆ ಬರಿದಾಗಿದೆ. ಅಣೆಕಟ್ಟೆ ನೀರನ್ನು ನಂಬಿ ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಒಣಗುತ್ತಿದ್ದು, ಅದನ್ನು ನೋಡಲು ಸಾಧ್ಯವಾಗದೆ ಆತಂಕದಲ್ಲಿ ಬದುಕುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಈ ನಡುವೆ ಬೆಂಗಳೂರಿಗರಿಗೆ ಕುಡಿಯಲು ನೀರಿಲ್ಲ. ಡಿ.ಕೆ.ಶಿವಕುಮಾರ್ ಮನೆ ಬೋರ್‌ವೆಲ್‌ ನೀರು ಬರುತ್ತಿಲ್ಲ ಎಂಬ ಕಾರಣದಿಂದ ಡಿಸಿಎಂ ಡಿ.ಕೆ ಶಿವಕುಮಾರ್ ಕೆಆರ್‌ಎಸ್ ಅಣೆಕಟ್ಟೆಯಿಂದ ಬೆಂಗಳೂರು ನಾಗರೀಕರಿಗೆ ನೀರಿನ ದಾಹ ತೀರಿಸಲು ಪ್ರಯತ್ನ ಮಾಡಿದ್ದಾರೆ. ಬೆಂಗಳೂರಿನ ಜನ ನಮ್ಮ ಬಂಧುಗಳೇ. ಆದರೆ, ಡಿಕೆಶಿ ಬೆಂಗಳೂರಿಗೆ ಮಾತ್ರ ಉಪ ಮುಖ್ಯಮಂತ್ರಿಗಳಲ್ಲ ಮಂಡ್ಯ ಜಿಲ್ಲೆಗೂ ಉಪಮುಖ್ಯಮಂತ್ರಿಗಳು ಎಂದು ಭಾವಿಸಿದ್ದೇವೆ ಎಂದರು.

ಜಿಲ್ಲೆಯಲ್ಲಿಯೂ ಸಹ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ನಿಜವಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಂ.ವಿ ಕೃಷ್ಣ, ದೊಡ್ಡಪಾಳ್ಯ ಜಗದೀಶ್, ಮಹೇಶ್, ಚೊಟ್ಟನಹಳ್ಳಿ ದರ್ಶನ್, ಹೊಸೂರು ಶಿವರಾಜು, ಶಿವಣ್ಣ, ಮೇಳಾಪುರ ದೇವರಾಜು, ಬೊಮ್ಮೇಗೌಡ, ಚಂದಗಾಲು ಪುರಷೋತ್ತಮ್, ದರಸಗುಪ್ಪೆ ಮಹೇಶ್, ನಾಗಣ್ಣ, ಜಯರಾಂ, ಅಚ್ಚಪ್ಪನಕೊಪ್ಪಲು ರವಿಲಕ್ಷಣ, ಕೃಷ್ಣ, ಕಡತನಾಳು ಮಹೇಶ, ಬಾಬು, ಚಾಮೇಗೌಡ, ಚಿಕ್ಕಂಕನಹಳ್ಳಿ ಸಿದ್ದಪ್ಪ, ಹೆಬ್ಬಾಡಿಹುಂಡಿ ಸಿದ್ದೇಗೌಡ ಸೇರಿದಂತೆ ಇತರರು ಇದ್ದರು.

Share this article