ಕನ್ನಡಪ್ರಭ ವಾರ್ತೆ ಮದ್ದೂರು
ಕೆಆರ್‌ಎಸ್ ಜಲಾಶಯದಿಂದ ಜಿಲ್ಲೆಯ ಶಿಂಷಾ ಎಡ ಮತ್ತು ಬಲದಂಡೆ ನಾಲೆಗಳ ಮೂಲಕ ನೀರು ಹರಿಸಿ ರೈತರ ಬೆಳೆ ರಕ್ಷಣೆ ಮಾಡಬೇಕು ಹಾಗೂ ಕೆರೆಕಟ್ಟೆಗಳನ್ನು ತುಂಬಿಸುವಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ತಾಲೂಕಿನ ಕೊಪ್ಪ, ಬೆಸಗರಹಳ್ಳಿ, ಕೆ.ಎಂ.ದೊಡ್ಡಿ, ಗೆಜ್ಜಲಗೆರೆ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ರೈತರು ತಾಲೂಕ ಕಚೇರಿ ಬಳಿಯಿಂದ ಒಣಗಿದ ಕಬ್ಬಿನ ಜಲ್ಲೆಗಳನ್ನು ಹಿಡಿದು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.
ನಂತರ ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿ ರಾಜ್ಯ ಸರ್ಕಾರ, ಕಾವೇರಿ ನದಿ ನೀರು ಪ್ರಾಧಿಕಾರ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ಹಾಗೂ ಜಿಲ್ಲೆ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು.ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಜಿಲ್ಲಾ ಉಪಾಧ್ಯಕ್ಷ ಕೆ. ರಾಮಲಿಂಗೇಗೌಡ, ತಾಲೂಕು ಮುಖಂಡರಾದ ಯರಗನಹಳ್ಳಿ ರಾಮಕೃಷ್ಣಯ್ಯ, ಸೋಶಿ ಪ್ರಕಾಶ್, ಕೀಳಘಟ್ಟ ನಂಜುಂಡಯ್ಯ ಸೇರಿದಂತೆ ಅನೇಕ ರೈತ ಮುಖಂಡರು ಮಾತನಾಡಿ ಕೆಆರ್‌ಎಸ್ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿಲ್ಲದಿದ್ದರೂ ಸಹ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸೋ ಮೂಲಕ ಜಿಲ್ಲೆಯ ರೈತರಿಗೆ ದ್ರೋಹ ಮಾಡಿ ಸಂಕಷ್ಟ ಪರಿಸ್ಥಿತಿ ತಂದೊಡ್ಡಿದ್ದಾರೆ ಇಂತಹವರು ರಾಜ್ಯದ ಜನಪ್ರತಿನಿಧಿಗಳಾಗಲು ಯೋಗ್ಯರಲ್ಲ ಎಂದು ಕಿಡಿಕಾರಿದರು.
ಜಿಲ್ಲೆಯಲ್ಲಿ ನೀರಿನ ಅಭಾವದಿಂದ ಕೋಟ್ಯಾಂತರ ಮೌಲ್ಯದ ಕಬ್ಬಿನ ಬೆಳೆ ಒಣಗಿ ನಾಶವಾಗುತ್ತಿದೆ. ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಚಲನಚಿತ್ರೋತ್ಸವ, ಗ್ಯಾರಂಟಿ ಯೋಜನೆಗಳ ಸಮಾವೇಶ ನಡೆಸುವ ಮೂಲಕ ರೈತರ ಬದುಕಿಗೆ ಕೊಳ್ಳಿ ಇಡುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.ರೈತ ದ್ರೋಹಿಗಳಾದ ನೀರಾವರಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರುಗಳು ಅಧಿಕಾರದಲ್ಲಿ ಇರಲು ಯೋಗ್ಯರಲ್ಲ. ತಕ್ಷಣ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ ಕಾವೇರಿ ನೀರಾವರಿ ನಿಗಮದ ಇಇ ನಂಜುಂಡೇಗೌಡ, ಎಂ.ಇ.ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಆರ್. ಎಸ್. ಸೀತಾರಾಮ್, ಅಣ್ಣೂರು ಮಹೇಂದ್ರ, ಕುದುರೆಗುಂಡಿ ನಾಗರಾಜು, ಹುರುಗಲವಾಡಿ ಉಮೇಶ, ಪ್ರಭುಲಿಂಗ, ಉಮೇಶ ಸೇರಿದಂತೆ ವಿವಿಧ ಗ್ರಾಮಗಳ ರೈತ ಮುಖಂಡರು ಪಾಲ್ಗೊಂಡಿದ್ದರು