ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಸೇರಿದ ರೈತಸಂಘದ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಧೋರಣೆಗಳನ್ನು ಖಂಡಿಸಿದರು ಹಾಗೂ ವಿವಿಧ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆ ೭ ಗಂಟೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬೇಕು. ಈ ಹಿಂದೆ ಇದ್ದಂತೆಯೇ ಕೃಷಿ ಪಂಪ್‌ಸೆಟ್ ವಿದ್ಯುತ್ ಸಂಪರ್ಕಗಳ ಅಕ್ರಮ- ಸಕ್ರಮಕ್ಕೆ ರೈತರ ಪಾಲನ್ನು ಪಡೆದು ಉಳಿದ ಎಲ್ಲಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಹಾಲಿ ಬೆಳೆದು ನಿಂತಿರುವ ಬೆಳೆಗಳ ರಕ್ಷಣೆ ಮತ್ತು ಜನ- ಜಾನುವಾರುಗಳ ಕುಡಿಯುವ ನೀರಿಗಾಗಿ ಕೆಆರ್‌ಎಸ್ ಹೇಮಾವತಿ ಅಣೆಕಟ್ಟೆಗಳ ಮೂಲಕ ನಾಲೆಗಳಿಗೆ ಕನಿಷ್ಠ ಎರಡು ಕಟ್ಟು ನೀರು ಹರಿಸಬೇಕು, ಆ ಮೂಲಕ ರೈತರನ್ನು ರಕ್ಷಿಸಬೇಕು ಎಂದು ಕೋರಿದರು.ಪ್ರಕೃತಿ ವಿಕೋಪದಿಂದ ಬೆಳೆ ಹಾಗೂ ಮನೆಗಳಿಗೆ ಹಾನಿಯಾಗಿರುವ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು, ಭತ್ತ ಕಟಾವು ಯಂತ್ರಗಳಿಗೆ ಜಿಲ್ಲಾದ್ಯಂತ ಏಕರೀತಿಯ( ಪ್ರತಿ ಗಂಟೆಗೆ ₹೨೨೦೦ ) ಬಾಡಿಗೆ ದರ ನಿಗದಿಪಡಿಸುವುದು, ಈ ಸಂಬಂಧ ಯಂತ್ರಗಳ ಮಾಲೀಕರು ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಸಭೆ ಕರೆದು ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿದರು.
ಜಿಲ್ಲಾ ರೈತಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎಸ್.ಲಿಂಗಪ್ಪಾಜಿ, ಖಜಾಂಚಿ ಎಸ್.ಕೆ.ರವಿಕುಮಾರ್, ವಿಜಯ್‌ಕುಮಾರ್, ಮರುವನಹಳ್ಳಿ ಶಂಕರ್ ಸೇರಿ ರೈತ ಮುಖಂಡರು, ಹೋರಾಟಗಾರರು ಮತ್ತು ರೈತ ಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು.