ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪುರದಾಳು ಗ್ರಾಮದ ಹನುಮಂತಪ್ಪ ದಾಸಣ್ಣನವರು ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಆತನ ಮೇಲೆ ಕಾಡಾನೆ ದಾಳಿ ನಡೆಸಿ ಕೊಂದು ಹಾಕಿದೆ. ಸರ್ಕಾರ ನಿಗದಿಪಡಿಸಿದ 25 ಲಕ್ಷ ರು. ಪರಿಹಾರವನ್ನು ಅರಣ್ಯ ಇಲಾಖೆ ವತಿಯಿಂದ ನೀಡಬೇಕು ಎಂದು ಆಗ್ರಹಿಸಿದರು.
ಕಾಡಾನೆಗಳು ಗುಂಪಾಗಿ ರೈತರ ಜಮೀನಿನ ಮೇಲೆ ದಾಳಿ ನಡೆಸುತ್ತಿವೆ.ರೈತರು ಬೆಳೆದ ಮೆಕ್ಕೆಜೋಳ,ಬಾಳೆ,ಅಡಿಕೆ ತೋಟವನ್ನು ನಾಶ ಮಾಡಿ ರೈತರಿಗೆ ನಷ್ಟ ಉಂಟು ಮಾಡುತ್ತಿವೆ. ಅಲ್ಲದೇ ಆನೆಗಳು ಗ್ರಾಮಗಳಿಗೆ ನುಗ್ಗುತ್ತಿವೆ.ಜನರು ಜೀವನ್ಮರಣದ ನಡುವೆ ಭಯದಿಂದ ಬದುಕುತ್ತಿದ್ದಾರೆ.ಆದ್ದರಿಂದ ತಕ್ಷಣವೇ ಕಾಡಾನೆ ದಾಳಿಯಿಂದ ರೈತರಿಗಾದ ಬೆಳೆ ನಷ್ಟ ಪರಿಹಾರವನ್ನು ನೀಡಬೇಕು.ಜಮೀನು ಮತ್ತು ಗ್ರಾಮದೊಳಗೆ ಕಾಡಾನೆಗಳು ಬಾರದಂತೆ ತಡೆಯಬೇಕು. ತಕ್ಷಣವೇ ಕಾಡಾನೆಗಳನ್ನು ಸ್ಥಳಾಂತರ ಮಾಡಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.ರಾಜ್ಯಾದ್ಯಂತ ವನ್ಯಜೀವಿ ಮತ್ತು ಮಾನವ ಸಂಘರ್ಷಗಳು ನಡೆಯುತ್ತಿದೆ.ಈ ಬಗ್ಗೆ ರೈತ ಸಂಘ ಸರ್ಕಾರದ ಜೊತೆ ಮಾತುಕತೆ ನಡೆಸಿ ಒತ್ತಾಯ ಮಾಡಿದರೂ ಸರ್ಕಾರ ಉದಾಸೀನತೆ ತೋರುತ್ತಿದೆ.ರೈತರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿವೆ.ರಾಜ್ಯ ಸರ್ಕಾರ ತಕ್ಷಣವೇ ವನ್ಯಜೀವಿ ಸಂಘರ್ಷವನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.
ಬೇಳೂರು ಗ್ರಾಮಸ್ಥರಾದ ಎಂ.ಡಿ.ನಾಗರಾಜ್ ಮಾತನಾಡಿ, ಪುರದಾಳು-ಬೇಳೂರು ಗ್ರಾಮಗಳಲ್ಲಿ ಕಾಡಾನೆ ಹಾವಳಿ ವಿಪರೀತವಾಗಿದೆ. ರಾತ್ರಿವೇಳೆ ತೋಟಗಳಿಗೆ ನುಗ್ಗಿ ಕಾಡಾನೆಗಳು ಬೆಳೆಗಳನ್ನು ನಾಶ ಪಡಿಸುತ್ತಿವೆ.ಇತ್ತೀಚಿಗೆ ಹನುಮಂತಪ್ಪ ಎಂಬ ರೈತನನ್ನು ಕೊಂದು ಹಾಕಿದೆ.ಹಾಗಾಗಿ ಗ್ರಾಮಗಳಲ್ಲಿ ಕಾಡಾನೆ ಭೀತಿ ಹೆಚ್ಚಾಗಿದ್ದು,ಜನರು ಜೀವ ಭಯದಲ್ಲಿ ಜೀವನ ನಡೆಸುವಂತಾಗಿದೆ. ಅರಣ್ಯ ಇಲಾಖೆ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ,ಕೂಡಲೇ ಕಾಡಾನೆಗಳನ್ನು ಸ್ಥಳಾಂತರ ಮಾಡಬೇಕು ಎಂದರು.