೨ಎ ಮೀಸಲಾತಿಗೆ ಆಗ್ರಹಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

KannadaprabhaNewsNetwork |  
Published : Dec 13, 2024, 12:46 AM IST

ಸಾರಾಂಶ

ಸರ್ಕಾರ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಅನುಷ್ಠಾನಗೊಳಿಸಿ ಸಮಾಜಕ್ಕೆ ಸಾಮಾಜಿಕ ನ್ಯಾಯ ಒದಗಿಸುವಂತಹ ಕಾರ್ಯ ಮಾಡಬೇಕಿದೆ

ಶಿರಹಟ್ಟಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ ೨ಎ ಅಡಿಯಲ್ಲಿ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿ ಶಿರಹಟ್ಟಿ ತಾಲೂಕು ಪಂಚಮಸಾಲಿ ಸಮಾಜದ ವತಿಯಿಂದ ಮಾರುತಿ ದೇವಸ್ಥಾನದಿಂದ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಸಮಾಜದ ತಾಲೂಕಾಧ್ಯಕ್ಷ ಬಸವರಾಜ ಪಲ್ಲೇದ, ಮುಖಂಡರಾದ ಸುನೀಲ ಮಹಾಂತಶೆಟ್ಟರ, ಬಸವರಾಜ ತುಳಿ ಮಾತನಾಡಿ, ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದ ಜಗದ್ಗುರು ಶ್ರೀ ಜಯಮೃತ್ತುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ೨ಎ ಮೀಸಲಾತಿಗೆ ಸಂಬಂಧಿಸಿದ ಹೋರಾಟದ ವೇಳೆ ಸರ್ಕಾರ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ ಮಾಡಿರುವುದು ಖಂಡನೀಯ ಎಂದರು.

ಈ ಹಿಂದೆ ಸಮಾಜ ಒಡೆಯುವ ಕೆಲಸಕ್ಕೆ ಮುಂದಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಒಮ್ಮೆ ಪಾಠ ಕಲಿಸಿದ್ದು, ಈ ಬಾರಿಯು ಅದೇ ಗತಿ ಬರಲಿದೆ ಎಂದು ಆರೋಪಿಸಿದರು. ಪಂಚಮಸಾಲಿ ಸಮಾಜದವರು ೭-೮ ವರ್ಷಗಳಿಂದ ೨ಎ ಮೀಸಲಾತಿಗಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಸರ್ಕಾರ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಅನುಷ್ಠಾನಗೊಳಿಸಿ ಸಮಾಜಕ್ಕೆ ಸಾಮಾಜಿಕ ನ್ಯಾಯ ಒದಗಿಸುವಂತಹ ಕಾರ್ಯ ಮಾಡಬೇಕಿದೆ ಎಂದರು.

ಗೂಂಡಾ ವರ್ತನೆಗೆ ತಕ್ಕಪಾಠ

ಬೆಳಗಾವಿ ಸುವರ್ಣಸೌಧದ ಬಳಿ ಪಂಚಮಸಾಲಿ ಗುರುಪೀಠದ ಶ್ರೀ ಬಸವಜಯ ಮೃತ್ತುಂಜಯ ಶ್ರೀಗಳ ನೇತೃತ್ವದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ರ‍್ಯಾಲಿ ಹೋರಾಟದಲ್ಲಿ ಪ್ರತಿಭಟನಾ ನಿರತರನ್ನು ಚದುರಿಸಲು ಪೊಲೀಸರಿಂದ ಲಾಠಿ ಚಾರ್ಜ ಮಾಡಿಸಿ ಗೂಂಡಾ ವರ್ತನೆ ಕಾಂಗ್ರೆಸ್ ಮಾಡಿದೆ ಎಂದು ಕಿಡಿಕಾರಿದರು.

ಈ ಘಟನೆಗೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು. ಶ್ರೀಗಳಿಗೆ ಹಾಗೂ ಪಂಚಮಸಾಲಿ ಸಮಾಜಕ್ಕೆ ಮುಖ್ಯಮಂತ್ರಿಗಳು ಬಹಿರಂಗ ಕ್ಷಮಾಪಣೆ ಕೇಳಬೇಕು.ಈ ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಹಿಂದಿನ ಸರ್ಕಾರ ನಮ್ಮ ಹೋರಾಟಕ್ಕೆ ಮಣಿದು ೨ಡಿ ಮೀಸಲಾತಿ ನೀಡಿತ್ತು. ತಾವು ಮುಖ್ಯಮಂತ್ರಿಯಾದರೆ ೨ಎ ಮೀಸಲಾತಿ ನೀಡುವುದಾಗಿ ಈ ಹಿಂದೆ ಸಿದ್ದರಾಮಯ್ಯನವರು ಹೇಳಿಕೊಂಡಿದ್ದರು. ಅವರ ಮಾತನ್ನು ನಂಬಿ ಪಂಚಮಸಾಲಿ ಮತದಾರರು ಕಾಂಗ್ರೆಸ್‌ಗೆ ಮತ ಹಾಕಿ ಗೆಲ್ಲಿಸಿ ತಂದು ಅವರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ಹಕ್ಕಿನಿಂದ ಕೊಟ್ಟ ಮಾತು ಪಾಲಿಸಿ ಎಂದು ಕೇಳುತ್ತಿದ್ದೇವೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಅವರು ಅಡ್ಡಗೋಡೆ ಮೇಲೆ ದೀಪ ಇಟ್ಟು ಮಾತನಾಡುವುದು ಬೇಡ ಎಂದರು.

ಆರ್.ಬಿ. ಕಮತ್, ಬಸವಣ್ಣೆಪ್ಪ ತುಳಿ, ಬಸಣ್ಣ ಹೊಸೂರ, ಎಸ್.ಬಿ. ಹೊಸೂರ, ಅಶೋಕ ವರವಿ, ಚನ್ನವೀರಪ್ಪ ಕಲ್ಯಾಣಿ, ಬಸವರಾಜ ಚಿಕ್ಕತೋಟದ, ಮಹಿಳಾ ಘಟಕದ ಅಧ್ಯಕ್ಷೆ ಬಸಮ್ಮ ಬ್ಯಾಲಹುಣಸಿ, ಎಂ.ಎ.ಪಾಟೀಲ್, ತಿಪ್ಪಣ್ಣ ಕೊಂಚಿಗೇರಿ, ಸುರೇಶ್ ಬ್ಯಾಲಹುಣಸಿ, ಅಶೋಕ್ ಬಳ್ಳಾರಿ, ಎಸ್.ಎಸ್. ಪಾಟೀಲ್, ನಂದಾ ಪಲ್ಲೇದ, ಶಶಿಧರ್ ಪಾಟೀಲ್ ಸೇರಿ ಅನೇಕರು ಪ್ರತಿಭಟನೆ ವೇಳೆ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿಗಳ ಜತೆಗೆ ಹಲವು ಹೊಸ ಯೋಜನೆಗಳೂ ಉಂಟು
ಕೇರಳ ರೀತಿ ಮನೆಯಲ್ಲೇ ರೋಗಿಗಳಿಗೆ ಆರೈಕೆ