ಹೊನ್ನಾಳಿ: ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಭಾಗವಾಗಿರುವ ಕರ್ನಾಟಕ ರಾಜ್ಯ ಗ್ರಾಮ ಪಂಜಾಯಿತಿ ನೌಕರರ ಸಂಘ ಸಿ.ಐ.ಟಿ.ಯು. ಸಂಯೋಜಿತ ರಾಜ್ಯ ಸಮಿತಿ ಕರೆಯ ಮೇರೆಗೆ ಬುಧವಾರ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ನೂರಾರು ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪಟ್ಟಣದ ಟಿ.ಬಿ. ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ತಾಲೂಕು ಪಂಚಾಯಿತಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಸಂಘದ ತಾಲೂಕು ಅಧ್ಯಕ್ಷ ಚಂದ್ರಪ್ಪ ದಿಡಗೂರು ಮಾತನಾಡಿ, 8 ಗಂಟೆ ಕೆಲಸ ನಿಗದಿ, ಕಾಯಂ ಕೆಲಸ, ಕೆಲಸಕ್ಕೆ ತಕ್ಕ ವೇತನ, ಸುರಕ್ಷತೆ, ಮುಷ್ಕರದ ಮತ್ತು ಸಂಘ ಕಟ್ಟುವ ಹಕ್ಕು ಇನ್ನಿತರ ಹಕ್ಕುಗಳನ್ನು ಇಲ್ಲವಾಗಿಸಿ, ಕಾರ್ಮಿಕರನ್ನು ಗುಲಾಮರನ್ನಾಗಿಸಲು ಕೇಂದ್ರ ಸರ್ಕಾರ ಕಾರ್ಪೊರೇಟ್ ಬಂಡವಾಳದ ಪರ ರೂಪಿಸಿರುವ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.ಗ್ರಾಪಂ ನೌಕರರಿಗೆ ಕನಿಷ್ಠ ₹36 ಸಾವಿರ ವೇತನ, ಸೇವಾ ಹಿರಿತನ ಪರಿಗಣಿಸಿ ವೇತನ ನಿಗದಿ, ಪಿಂಚಣಿ ಕನಿಷ್ಠ ₹6 ಸಾವಿರ, ಎಲ್ಲ ಗ್ರಾ.ಪಂ.ಗಳಿಗೆ ಎಸ್.ಡಿ.ಎ. ನೇಮಕ, ಗುತ್ತಿಗೆ, ಹೊರಗುತ್ತಿಗೆ, ನಿಗದಿತ ಅವಧಿಯ ಉದ್ಯೋಗ, ಅಪ್ರೆಂಟಿಸ್, ಟ್ರೈನಿ ಮುಂತಾದ ಹೆಸರಿನಲ್ಲಿ ಕಾರ್ಮಿಕರ ನೇಮಕ ನಿಲ್ಲಿಸಬೇಕು. ಗುತ್ತಿಗೆ, ಮುಂತಾದ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ತಕ್ಷಣ ಜಾರಿ ಮಾಡಬೇಕು, ಎನ್.ಪಿ.ಎಸ್. ಮತ್ತು ಒ.ಪಿ.ಎಸ್. ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆ ಮುಂತಾದ 23 ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸುವಂತೆ ಒತ್ತಾಯಿಸಿದರು.
ತಾಪಂ ಸಹಾಯಕ ನಿರ್ದೇಶಕ ನಾಗರಾಜ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ತಾಪಂ ಕಚೇರಿ ವ್ಯವಸ್ಥಾಪಕ ಮಹಮ್ಮದ್ ರಫೀ, ಗ್ರಾಪಂ ನೌಕರರ ಸಂಘ ಕಾರ್ಯದರ್ಶಿ ದಾನಪ್ಪ, ದಯಾನಂದ, ದೇವರಾಜ್, ಗಣೇಶ, ವೀರಭಧ್ರಪ್ಪ, ಮಲ್ಲೇಶ ನಾಯ್ಕ ಸೇರಿದಂತೆ ಗ್ರಾಪಂ ನೌಕರರು ಇದ್ದರು.- - -
-9ಎಚ್.ಎಲ್.ಐ2.ಜೆಪಿಜಿ: