ಗ್ರಾಮ ಪಂಚಾಯಿತಿ ಠರಾವಿನ ಮೂಲಕ ನೇಮಕಗೊಂಡು ಜಿ.ಪಂನಿಂದ ಅನುಮೋದನೆ ಬಾಕಿ ಇರುವ ಸಿಬ್ಬಂದಿಗೂ ಇಡಿಗಂಟು ನೀಡಲು ಆದೇಶಿಸಬೇಕು ಎಂದು ಸಂಘ ಮನವಿ ಮಾಡಿದೆ.
ಕನ್ನಡಪ್ರಭ ವಾರ್ತೆ ಬೀದರ್
ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಕನಿಷ್ಠ ವೇತನ ಜಾರಿ ಸೇರಿದಂತೆ ಪ್ರಮುಖ 13 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು ಸಂಯೋಜಿತ) ಜಿಲ್ಲಾ ಸಮಿತಿಯಿಂದ ಜಿ.ಪಂ. ಕಚೇರಿ ಎದುರುಗಡೆ ಧರಣಿ ನಡೆಸಿದರು.ಈ ಕುರಿತು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗೆ ಮನವಿ ಸಲ್ಲಿಸಿ ಕಳೆದ ಡಿಸೆಂಬರ್ 2025ರಿಂದ ಗ್ರಾಮ ಪಂಚಾಯಿತಿ ನೌಕರರ ಪ್ರಮುಖ ಬೇಡಿಕೆಗಳ ಕುರಿತು ಇಲಾಖೆಯೊಂದಿಗೆ ಹಲವು ಬಾರಿ ಚರ್ಚೆ ನಡೆಸಲಾಗಿದ್ದು, ಜುಲೈ 9ರಂದು ನೌಕರರು ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆದಿದ್ದರು. ಈ ಸಂದರ್ಭ ದಲ್ಲಿ ಇಲಾಖೆಯ ಅಧಿಕಾರಿಗಳು ನೌಕರರ ಬೇಡಿಕೆಗಳಿಗೆ ಸ್ಪಂದಿಸಿದ ಹಿನ್ನೆಲೆಯಲ್ಲಿ ಧರಣಿಯನ್ನು ಹಿಂಪಡೆಯಲಾಗಿತ್ತು. ನೌಕರರ ಸಮಸ್ಯೆಗಳಿಗೆ ಸಂಬಂಧಿಸಿದ ಐದು ಕಡತಗಳನ್ನು ಸಚಿವರ ಬಳಿಗೆ ಕಳುಹಿಸಲಾಗಿದ್ದು, ಅವುಗಳಿಗೆ ಶೀಘ್ರ ಅಂತಿಮ ಆದೇಶ ಹೊರಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಘ ಒತ್ತಾಯಿಸಿದೆ.ಸಂಘದ ಪ್ರಮುಖ ಬೇಡಿಕೆಗಳಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಕರವಸೂಲಿಗಾರರು, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್‌ಗಳು, ನೀರುಗಂಟಿಗಳು, ಜವಾನರು ಹಾಗೂ ಸ್ವಚ್ಛತಾಗಾರರನ್ನು ಏಕಕಾಲದಲ್ಲಿ ಸರ್ಕಾರಿ ನೌಕರರೆಂದು ಘೋಷಿಸಿ ಸೇವಾ ಹಿರಿತನದ ಆಧಾರದ ಮೇಲೆ ವೇತನ ಹೆಚ್ಚಳ ನೀಡಬೇಕು. ನೌಕರರು ನಿವೃತ್ತರಾದಾಗ ಅಥವಾ ಮೃತಪಟ್ಟಾಗ 6 ಲಕ್ಷ ಇಡುಗಂಟು ನೀಡಬೇಕು. ಗ್ರಾಮ ಪಂಚಾಯಿತಿ ಠರಾವಿನ ಮೂಲಕ ನೇಮಕಗೊಂಡು ಜಿ.ಪಂನಿಂದ ಅನುಮೋದನೆ ಬಾಕಿ ಇರುವ ಸಿಬ್ಬಂದಿಗೂ ಇಡಿಗಂಟು ನೀಡಲು ಆದೇಶಿಸಬೇಕು ಎಂದು ಸಂಘ ಮನವಿ ಮಾಡಿದೆ.
ಈಗಾಗಲೇ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಮುಂದುವರಿಸಬೇಕು. ಕಂಪ್ಯೂಟರ್ ಜ್ಞಾನ ಮತ್ತು ಅಗತ್ಯ ವಿದ್ಯಾರ್ಹತೆ ಹೊಂದಿರುವ ಪಂಚಾಯಿತಿ ನೌಕರರಿಗೆ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅವಕಾಶ ಕಲ್ಪಿಸಬೇಕು ಎಂದು ಸಂಘ ಆಗ್ರಹಿಸಿದೆ.ಪ್ರತಿ ಗ್ರಾಮ ಪಂಚಾಯಿತಿಗೆ ಲೆಕ್ಕ ಸಹಾಯಕ ಹುದ್ದೆ ಸೃಷ್ಟಿಸಬೇಕು. ಬಿಲ್ ಕಲೆಕ್ಟರ್ ಮತ್ತು ಗುಮಾಸ್ತ ವೃಂದದಿಂದ ಗ್ರೇಡ್-2 ಕಾರ್ಯದರ್ಶಿ ಹಾಗೂ ಲೆಕ್ಕ ಸಹಾಯಕ ಹುದ್ದೆಗೆ ನೇಮಕಗೊಂಡ ನೌಕರರಿಗೆ ಕೆಸಿಎಸ್‌ಆರ್ ನಿಯಮ 325ರಂತೆ ಹಿಂದಿನ ಸೇವೆಯನ್ನು ಪರಿಗಣಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಸಂಘ ಆಗ್ರಹಿಸಿದೆ.ಸರ್ಕಾರ ನೌಕರರ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸಿ ಬಾಕಿ ಇರುವ ಕಡತಗಳಿಗೆ ಅಂತಿಮ ಆದೇಶ ಹೊರಡಿಸುವ ಮೂಲಕ ಗ್ರಾಮ ಪಂಚಾಯಿತಿ ನೌಕರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಜೀವನ ಕನ್ನಳ್ಳೆ, ಕಾರ್ಯದರ್ಶಿ ಸಂಗಮೇಶ, ಪ್ರಭು ಸಂತೋಷಕರ್, ವಿಜಯಕುಮಾರ ಪಾಟೀಲ್, ಘಾಳೆಪ್ಪಾ ನೌಬಾದೆ, ರಮೇಶ ಭಾಲ್ಕೆ, ಸಂಜು ಕೌಠಾ ಸೇರಿದಂತೆ ಇನ್ನಿತರರು ಇದ್ದರು.-
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.