ಕನ್ನಡಪ್ರಭ ವಾರ್ತೆ ಹಾವೇರಿ
ಹಾನಗಲ್ಲ ಕಡೆಯಿಂದ ಹಾವೇರಿಗೆ ಬರುವ ಬಸ್ಸುಗಳನ್ನು ನಿಲುಗಡೆ ಮಾಡದಿರುವುದರಿಂದ ವಿದ್ಯಾರ್ಥಿಗಳಿಗೆ ವಿಪರೀತ ಸಮಸ್ಯೆಯಾಗಿದ್ದು, ಸಮಸ್ಯೆ ಪರಿಹರಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಈ ಹಿಂದೆ ಮನವಿ ಕೊಡಲಾಗಿತ್ತು. ಇಷ್ಟಾದರೂ ಸಮಸ್ಯೆ ಪರಿಹಾರ ಕಾಣದಿರುವುದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿಯರು ಶ್ರೀಕಂಠಪ್ಪ ಬಡಾವಣೆಯಲ್ಲಿ ಸಂಚರಿಸುತ್ತಿದ್ದ ಬಸ್ ನಿಲುಗಡೆ ಮಾಡಿ ಪ್ರತಿಭಟನೆ ಮಾಡಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತು.
ಪೊಲೀಸ್ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಬಸ್ ಪ್ರಯಾಣಿಕರ ಮಧ್ಯೆ ವಾಗ್ವಾದ ನಡೆಯಿತು. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸ್ಥಳಕ್ಕೆ ಬರುವ ವರೆಗೂ ನಿಲುಗಡೆ ಮಾಡಿದ ಬಸ್ ಬಿಡುವುದಿಲ್ಲ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಪಟ್ಟು ಹಿಡಿದರು.ನಂತರ ಸ್ಥಳಕ್ಕಾಗಾಮಿಸಿದ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಹಾಗೂ ಡಿಟಿಒ ಅವರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿ, ಬೆಳಗ್ಗೆ ೮.೩೦ರಿಂದ ೧೦ ಗಂಟೆವರೆಗೂ ಎರಡು ಹೆಚ್ಚುವರಿ ಬಸ್‌ಗಳನ್ನು ಬಿಡಬೇಕು. ಹಾನಗಲ್ಲ-ಹಾವೇರಿ ಮಾರ್ಗವಾಗಿ ಎರಡೂ ಕಡೆ ಸಂಚರಿಸುವ ಎಲ್ಲ ಬಸ್‌ಗಳನ್ನು ಶ್ರೀಕಂಠಪ್ಪ ಬಡಾವಣೆಗೆ ನಿಲುಗಡೆ ಮಾಡಬೇಕು. ಕೆಲವು ಕಂಡಕ್ಟರ್‌ಗಳು ವಿದ್ಯಾರ್ಥಿನಿಯರಿಗೆ ಅವಾಚ್ಯ ಶಬ್ದಗಳನ್ನು ಬಳಸಿ ದೌರ್ಜನ್ಯ ನಡೆಸುತ್ತಿದ್ದು, ಕೂಡಲೇ ಅಂತಹವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಡಿಟಿಒ ಹಾಗೂ ಮ್ಯಾನೇಜರ್ ಮಾತನಾಡಿ, ಇಂದೇ ಸರ್ವೇ ಮಾಡಿಸಿ ವಿದ್ಯಾರ್ಥಿಗಳಿಗೆ ಬಸ್ ನಿಲಗಡೆ ಮಾಡಲು ಅನುಕೂಲ ಕಲ್ಪಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು. ನಂತರ ವಿದ್ಯಾರ್ಥಿಗಳು ಸಮಸ್ಯೆ ಬಗೆಹರಿಯದೇ ಹೋದರೆ ಮತ್ತೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಹೇಳಿ ಪ್ರತಿಭಟನೆ ಹಿಂಪಡೆದರು.ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡರಾದ ಭಾಗ್ಯಶ್ರೀ, ಐಶ್ವರ್ಯ, ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಶ್ರೀಕಂಠಪ್ಪ ಬಡಾವಣೆಯ ನಿವಾಸಿಗಳ ಸಂಘದ ಮುಖಂಡರಾದ ಸಿ. ಕೊಟ್ರೆಗೌಡ ಹಾಗೂ ಎರಡೂ ಹಾಸ್ಟೆಲ್‌ಗಳ ವಿದ್ಯಾರ್ಥಿಗಳು ಇದ್ದರು.