ಮಂಡ್ಯ : ವೈದ್ಯೆ ಮೇಲಿನ ಅತ್ಯಾಚಾರ ವಿರೋಧಿಸಿ ವಕೀಲರ ಸಂಘದ ಪದಾಧಿಕಾರಿಗಳ ಪ್ರತಿಭಟನೆ

KannadaprabhaNewsNetwork |  
Published : Aug 18, 2024, 01:59 AM ISTUpdated : Aug 18, 2024, 07:31 AM IST
೧೭ಕೆಎಂಎನ್‌ಡಿ-೨ಹಿಂದೂಗಳು, ವೈದ್ಯರು ಮತ್ತು ವಕೀಲರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ವಕೀಲ ಸಂಘದ ಪದಾಧಿಕಾರಿಗಳು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಹಾಗೂ ವಿದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲೆ ಹಿಂದೂಯೇತರರು ನಡೆಸುತ್ತಿರುವ ಹಲ್ಲೆ ಮತ್ತಿತರ ಕಾನೂನು ವಿರೋಧಿ ಚಟುವಟಿಕೆಗಳನ್ನು ಖಂಡಿಸಿದರು.  

 ಮಂಡ್ಯ :  ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ವೈದ್ಯೆ ಮೇಲೆ ನಡೆದಿರುವ ಅತ್ಯಾಚಾರ, ಕೊಲೆ ಹಾಗೂ ವಕೀಲರ ಮೇಲಿನ ಹಲ್ಲೆ ಪ್ರಕರಣಗಳ ವಿರುದ್ಧ ವಕೀಲರ ಸಂಘದ ಪದಾಧಿಕಾರಿಗಳು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ವಕೀಲರ ಸಂಘದ ಬಳಿ ಸೇರಿದ ಪದಾಧಿಕಾರಿಗಳು ಅಲ್ಲಿಂದ ಮೆರವಣಿಗೆ ಹೊರಟು ಬೆಂಗಳೂರು- ಮೈಸೂರು ಹೆದ್ದಾರಿಗೆ ಆಗಮಿಸಿ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. ನಂತರ ಆರ್.ಪಿ.ರಸ್ತೆ, ಕೆ.ಆರ್.ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು.

ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಹಾಗೂ ವಿದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲೆ ಹಿಂದೂಯೇತರರು ನಡೆಸುತ್ತಿರುವ ಹಲ್ಲೆ ಮತ್ತಿತರ ಕಾನೂನು ವಿರೋಧಿ ಚಟುವಟಿಕೆಗಳನ್ನು ಖಂಡಿಸಿದರು. ಭಾರತೀಯ ಹಿಂದೂಗಳಿಗೆ ಅವಮಾನ, ಹಲ್ಲೆ, ದೌರ್ಜನ್ಯ, ಅಗೌರವ ಸೂಚಿಸುವಂತಹ ಅನೇಕ ಪ್ರಸಂಗಗಳು ನಡೆದಿವೆ. ಈ ಬಗ್ಗೆ ದೇಶದಲ್ಲಿ ಪ್ರತಿಭಟನೆ ನಡೆಯುತ್ತಿದ್ದರೂ ದೌರ್ಜನ್ಯ ನಿಂತಿಲ್ಲ. ಕೋಲ್ಕತ್ತದ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯೊಂದರಲ್ಲಿ ಯುವ ವೈದ್ಯೆ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಅತ್ಯಂತ ಘೋರ ಕೃತ್ಯವಾಗಿದೆ ಎಂದು ದೂರಿದರು.

ಇದಲ್ಲದೆ, ದೇಶದೆಲ್ಲೆಡೆ ವಿನಾಕಾರಣ ವಕೀಲರ ಮೇಲೆ ಆಗಾಗ ಹಲ್ಲೆ ನಡೆಸುತ್ತಿರುವ ದುಷ್ಟ ಪ್ರವೃತ್ತಿಯೂ ಮುಂದುವರೆದಿದೆ. ಇಂತಹ ನೀಚ ಕೃತ್ಯಗಳು ಮರುಕಳಿಸದಂತೆ ಸರ್ಕಾರಗಳು ಕಠಿಣ ಕಾಯಿದೆ ರೂಪಿಸಬೇಕು. ಹಿಂದೂಗಳು, ವೈದ್ಯರು, ವಕೀಲರನ್ನು ರಕ್ಷಣೆ ಮಾಡಿ ದೌರ್ಜನ್ಯ ವೆಸಗುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಆಗ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಬಹುದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಅಧ್ಯಕ್ಷ ಎಂ.ಟಿ.ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ಡಿ.ಎಂ.ಮಹೇಶ, ಕೆ.ಎಲ್.ಮರಿಸ್ವಾಮಿ, ಸೀತಾರಾಮ, ಎಂ.ರೂಪಾ, ಎಂ.ಶ್ರೀನಿವಾಸ್, ಎಚ್.ಆರ್ ಗಿರಿಜಾಂಬಿಕೆ, ಕೆ.ಎಂ.ಬಸವರಾಜು, ಎಂ.ಜೆ.ಜೈನ್, ಮರೀಗೌಡ ಇತರರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ