-ಕನ್ನಡ ಮತ್ತು ಹಿಂದಿ ಸಹಶಿಕ್ಷಕರ ಮರುನೇಮಕ ಆದೇಶಕ್ಕೆ ಆಗ್ರಹ । ಬೇವಿನಹಳ್ಳಿ ಮೊರಾರ್ಜಿ ಶಾಲಾ ಮಕ್ಕಳು ತಹಸೀಲ್ದಾರ್ ಕಚೇರಿಗೆ ಪಾದಯಾತ್ರೆ
ಕನ್ನಡಪ್ರಭ ವಾರ್ತೆ ಶಹಾಪುರಸುಳ್ಳು ಆರೋಪ ಮಾಡಿ ಕನ್ನಡ ಹಾಗೂ ಹಿಂದಿ ಶಿಕ್ಷಕರನ್ನು ಸೇವೆಯಿಂದ ಅಮಾನತುಗೊಳಿಸಿದ್ದು, ತಕ್ಷಣ ಶಿಕ್ಷಕರನ್ನು ಪುನಃ ಶಾಲೆಗೆ ಸೇರಿಸಿಕೊಳ್ಳುವಂತೆ ಆಗ್ರಹಿಸಿ ತಾಲೂಕಿನ ಬೇವಿನಹಳ್ಳಿ ಮೊರಾರ್ಜಿ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನಾ ಪಾದಯಾತ್ರೆ ನಡೆಸಿದರು.
ತಮ್ಮ ಪ್ರೀತಿಯ ಶಿಕ್ಷಕರಿಗಾಗಿ ಜೀವದ ಹಂಗು ತೊರೆದು 300ಕ್ಕೂ ಹೆಚ್ಚು ಶಾಲಾ ಮಕ್ಕಳು 5 ಕಿಲೋಮೀಟರ್ ರಾಜ್ಯ ಹೆದ್ದಾರಿ ಮೇಲೆ ಪ್ರತಿಭಟನಾ ಪಾದಯಾತ್ರೆ ಮೂಲಕ ನಗರದ ತಹಸೀಲ್ದಾರ್ ಕಚೇರಿ ಬಳಿ 4 ಗಂಟೆಗಳ ಕಾಲ ಪ್ರತಿಭಟನೆ ನಡೆಸಿ, ಅಮಾನತುಗೊಳಿಸಿದ ಶಿಕ್ಷಕರನ್ನು ಪುನಃ ಸೇವೆಗೆ ಮರುನೇಮಕ ಆದೇಶ ನೀಡುವವರಿಗೆ ಮತ್ತು ವಾರ್ಡನ್ ಹಾಗೂ ಪ್ರಾಂಶುಪಾಲರನ್ನು ಕೂಡಲೇ ವಜಾ ಮಾಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಹಠಹಿಡಿದ ಘಟನೆ ನಡೆಯಿತು.ಘಟನೆ ವಿವರ: ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಶಿವರಾಜ್ ಬೀರನೂರ್ ಹಾಗೂ ಹಿಂದಿ ಶಿಕ್ಷಕ ಮುಬಾರಕ್ ಅವರು ಪ್ರಾಂಶುಪಾಲರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಶಾಲಾ ವಾತವರಣ ಹಾಳು ಮಾಡಿರುವುದು ಹಾಗೂ ವಿದ್ಯಾರ್ಥಿಗಳಿಗೆ ಆಮಿಷ ತೋರಿಸಿ, ರೂಮಿಗೆ ಕರೆಯುವುದು ಹಾಗೂ ವಸತಿ ಶಾಲೆಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದು ಮತ್ತು ಪ್ರಾಂಶುಪಾಲರ ವಿರುದ್ಧ ಸುಳ್ಳು ಆರೋಪ ಹೇಳಲು ವಿದ್ಯಾರ್ಥಿಗಳಿಗೆ ಪ್ರಚೋಧಿಸುವ ಮೂಲಕ ಕರ್ತವ್ಯಲೋಪ ವೆಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಈ ನೌಕರರ ವಿರುದ್ಧ ನಿರ್ದೇಶಕರು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜು ಪಿ.ಎಸ್. ಅವರು ಡಿ.2 ರಂದು ತಕ್ಷಣ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.
ಮಕ್ಕಳು ಹೇಳುವುದೇ ಬೇರೆ: ಆದರೆ, ಕನ್ನಡ ಮತ್ತು ಹಿಂದಿ ಶಿಕ್ಷಕರಾದ ಶಿವರಾಜ್ ಬೀರನೂರ ಹಾಗೂ ಮುಬಾರಕ್ ಅವರು ಮಕ್ಕಳ ಜೊತೆ ಅತ್ಯಂತ ಸೌಜನ್ಯದಿಂದ ವರ್ತಿಸುತ್ತಾರೆ. ಅಲ್ಲದೇ, ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಪಾಠ ಮಾಡುತ್ತಾರೆ. ವಿದ್ಯಾರ್ಥಿಗಳ ಪ್ರತಿಯೊಂದು ಸಮಸ್ಯೆಗೂ ಇವರೇ ಸ್ಪಂದಿಸುತ್ತಾರೆ. ಇವರ ವಿರುದ್ಧ ಪ್ರಾಂಶುಪಾಲ ನೀಲಮ್ಮ ಹಾಗೂ ವಾರ್ಡನ್ ರಾವುತಪ್ಪ ಅವರು ಸುಳ್ಳು ಆರೋಪ ಮಾಡುತ್ತಾ, ವಿದ್ಯಾರ್ಥಿಗಳ ಮತ್ತು ಶಿಕ್ಷಕರ ನಡುವೆ ಸಂಬಂಧ ಕಲ್ಪಿಸಿ ಮಾನಸಿಕವಾಗಿ ಕುಗ್ಗುವಂತೆ ಮಾಡುವುದು, ಜಾತೀಯತೆ ಮಾಡುತ್ತಾ, ವಿದ್ಯಾರ್ಥಿನಿಯರ ಫೋಟೋ ತೆಗೆದು ಹೆದರಿಸುವುದು ಮಾಡುವುದಲ್ಲದೆ ವಿದ್ಯಾರ್ಥಿಗಳಿಗೆ ಅಶ್ಲೀಲ ಪದಗಳಿಂದ ಬೈಯುವುದು ವಾರ್ಡನ್ ಮತ್ತು ಪ್ರಾಂಶುಪಾಲರ ದುರ್ವರ್ತನೆ ಮಿತಿಮೀರಿದೆ. ಸುಳ್ಳು ಆರೋಪಿಸಿ, ನೀವು ನಮ್ಮ ಮೇಲೆ ಹಲ್ಲೆ ಮಾಡಲು ಬರುತ್ತೀರಾ ಎಂದು ಶಹಾಪುರ ಪೊಲೀಸರನ್ನು ಕರೆಯಿಸಿ ಬೆದರಿಕೆ ಹಾಕುವರು ಎಂದು ಅಧಿಕಾರಿಗಳ ಮುಂದೆ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡರು.ಮಕ್ಕಳು ಏನೇ ಕೇಳಿದರೂ ಅದಕ್ಕೆ ಸ್ಪಂದಿಸದೆ ನಿರ್ಲಕ್ಷ್ಯ ತೋರುತ್ತಾ, ಇಲ್ಲಿನ ವ್ಯವಸ್ಥೆಗೆ ಹೊಂದಿಕೊಂಡು ಇರುವದಾದರೆ ಇರಿ. ನನ್ನ ಬಗ್ಗೆ ಯಾರಿಗಾದರೂ ಹೇಳುವುದಿದ್ದರೆ ಹೇಳಿರಿ, ನನ್ನನ್ನು ಯಾರು ಏನು ಮಾಡಿಕೊಳ್ಳುತ್ತಾರೆ, ನಾನು ನೋಡುತ್ತೇನೆ ಎಂದು ಅಸಡ್ಡೆ ವರ್ತನೆ ತೋರಿದ ವಾರ್ಡನ್ ರಾವುತಪ್ಪ ಹಾಗೂ ಪ್ರಾಂಶುಪಾಲ ನೀಲಮ್ಮ ಅವರನ್ನು ಸೇವೆಯಿಂದ ವಜಗೊಳಿಸಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು.
ಪ್ರತಿಭಟನಾ ಸ್ಥಳಕ್ಕೆ ಅಧಿಕಾರಿಗಳ ದಂಡು: ಮಕ್ಕಳು ಬೇವಿನಹಳ್ಳಿ ಕ್ರಾಸ್ ಬಳಿ ಇರುವ ಮೊರಾರ್ಜಿ ವಸತಿ ಶಾಲೆಯಿಂದ ಮುಖ್ಯ ರಸ್ತೆ ಮೂಲಕ ಪ್ರತಿಭಟನಾ ಪಾದಯಾತ್ರೆ ಬರುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ, ಪೊಲೀಸರು ಮಕ್ಕಳನ್ನು ತಡೆಯಲು ಮುಂದಾದಾಗ ನಿಲ್ಲದ ಮಕ್ಕಳು ಪೊಲೀಸರ ಮಾತು ಧಿಕ್ಕರಿಸಿ ನಡೆದುಕೊಂಡು ಹೊರಟರು.ತಹಸೀಲ್ದಾರ್ ಕಚೇರಿಗೆ ಆಗಮಿಸುತ್ತಿದ್ದಂತೆ ತಹಸೀಲ್ದಾರ್ ಉಮಾಕಾಂತ ಹಳ್ಳೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಚನ್ನಬಸಪ್ಪ, ಪೊಲೀಸ್ ಇನ್ಸ್ ಪೆಕ್ಟರ್ ಎಸ್.ಎಂ. ಪಾಟೀಲ್ , ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇಲಾಖೆ ಜಿಲ್ಲಾ ಅಧಿಕಾರಿಗಳು ಸಿದ್ದಣ್ಣ ಅಣಬಿ ಅವರು ಆಗಮಿಸಿ ಮಕ್ಕಳ ಮನವೊಲಿಸಲು ಹರಸಾಹಸಪಟ್ಟರು. ಕೊನೆಗೆ ಒಂದೆರಡು ದಿನ ಗಡವು ಪಡೆದು ಮಕ್ಕಳು ಪ್ರತಿಭಟನೆ ಹಿಂಪಡೆದರು.
---ಬಾಕ್ಸ್ --ವಸತಿ ಶಾಲೆ ಮಕ್ಕಳು ಬೀದಿಗೆ ಬಿಟ್ಟವರ ವಿರುದ್ಧ ಕ್ರಮಕ್ಕೆ ಒತ್ತಾಯ
ವಸತಿ ಶಾಲೆಯಲ್ಲಿ ನೆಮ್ಮದಿಯಾಗಿ ವಿದ್ಯೆ ಕಲಿಯಬೇಕಾದ ಮಕ್ಕಳು ಅಲ್ಲಿನ ಅವ್ಯವಸ್ಥೆ ವಿರುದ್ಧ ಮೇಲಾಧಿಕಾರಿಗಳ ಗಮನಕ್ಕೆ ಪ್ರಯೋಜನೆ ಆಗದಿದ್ದಾಗ ವಸತಿ ಶಾಲೆಯಿಂದ ಬೀದಿಗೆ ಬಂದ ಮಕ್ಕಳಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಅದಕ್ಕೆ ಹೊಣೆ ಯಾರು.? ಇದನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ದಲಿತ ಪರ ಸಂಘಟನೆಗಳು ಹಾಗೂ ರೈತ ಸಂಘಗಳು ಜಿಲ್ಲಾಧಿಕಾರಿಗೆ ಒತ್ತಾಯಿಸಿವೆ.-------
ಫೋಟೊ: ಸೇವೆಯಿಂದ ಅಮಾನತು ಮಾಡಿದ ಶಿಕ್ಷಕರನ್ನು ಪುನಹ ಸೇವೆಗೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿ ಶಹಾಪುರ ತಾಲೂಕಿನ ಬೇವಿನಹಳ್ಳಿ ಕ್ರಾಸ್ ಬಳಿ ಇರುವ ಮೊರಾರ್ಜಿ ವಸತಿ ಶಾಲೆ ಮಕ್ಕಳು ತಹಸೀಲ್ದಾರ್ ಕಚೇರಿಯವರೆಗೆ 5 ಕಿಲೋಮೀಟರ್ ಪ್ರತಿಭಟನಾ ಪಾದಯಾತ್ರೆ ನಡೆಸಿದರು.4ವೈಡಿಆರ್13
-------ಫೋಟೊ: ಪ್ರತಿಭಟನಾ ನಿರತ ಮಕ್ಕಳ ಸಮಸ್ಯೆಗಳನ್ನು ಆಲಿಸುತ್ತಿರುವ ತಹಸೀಲ್ದಾರ್ ಮತ್ತು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ.
4ವೈಡಿಆರ್12: