ಕನ್ನಡಪ್ರಭ ವಾರ್ತೆ ಹಾಸನ
ನಗರದ ಎನ್.ಆರ್. ವೃತ್ತದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯ ಎದುರು ನೂರಾರು ಬ್ಯಾಂಕ್ ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಎನ್.ಆರ್. ವೃತ್ತದಿಂದ ಹೇಮಾವತಿ ಪ್ರತಿಮೆವರೆಗೆ ಬೃಹತ್ ಮೆರವಣಿಗೆ ನಡೆಸಿ ತಮ್ಮ ನ್ಯಾಯಯುತ ಬೇಡಿಕೆಗೆ ಬೆಂಬಲ ಸೂಚಿಸಿದರು. ಈ ಮುಷ್ಕರದಿಂದ ಬ್ಯಾಂಕ್ ವ್ಯವಹಾರಗಳು ಸ್ಥಗಿತಗೊಂಡು ಸಾರ್ವಜನಿಕರಿಗೆ ತಾತ್ಕಾಲಿಕ ಅಸೌಕರ್ಯ ಉಂಟಾಯಿತು.ಪ್ರತಿಭಟನೆಯಲ್ಲಿ ಯು.ಎಫ್.ಬಿ.ಯು. ಹಾಸನ ಘಟಕದ ಸಂಚಾಲಕ ಆರ್. ಕುಮಾರ್ ಅವರು ಉದ್ದೇಶಿಸಿ ಮಾತನಾಡಿ, ೨೦೨೪ರ ಮಾರ್ಚಿಯಲ್ಲಿ ನಡೆದ ೧೨ನೇ ದ್ವಿಪಕ್ಷೀಯ ಒಪ್ಪಂದದಲ್ಲಿ ಬ್ಯಾಂಕ್ ಸಿಬ್ಬಂದಿಯ ಹಲವು ಬೇಡಿಕೆಗಳೊಂದಿಗೆ ವಾರದಲ್ಲಿ ಐದು ದಿನಗಳ ಕೆಲಸದ ವ್ಯವಸ್ಥೆಯನ್ನೂ ಒಪ್ಪಿಕೊಳ್ಳಲಾಗಿದೆ. ಆದರೆ ಒಪ್ಪಂದಕ್ಕೆ ವರ್ಷ ಸಮೀಪಿಸುತ್ತಿದ್ದರೂ ಸರ್ಕಾರ ಇದನ್ನು ಜಾರಿಗೊಳಿಸಲು ಯಾವುದೇ ಸಕಾರಾತ್ಮಕ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಒಂದು ತಿಂಗಳಿನಿಂದ ವಿವಿಧ ರೀತಿಯ ಶಾಂತಿಯುತ ಪ್ರತಿಭಟನೆಗಳ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರೂ ನಿರ್ಲಕ್ಷ್ಯ ವಹಿಸಿದ ಕಾರಣ ಅನಿವಾರ್ಯವಾಗಿ ಮುಷ್ಕರಕ್ಕೆ ಇಳಿಯಬೇಕಾಯಿತು ಎಂದು ಹೇಳಿದರು.
ಸಾರ್ವಜನಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದರು. ಬ್ಯಾಂಕ್ ಸಿಬ್ಬಂದಿ ಇಂದು ಮಿತಿ ಮೀರಿದ ಕೆಲಸದ ಒತ್ತಡದಲ್ಲಿ ಕೆಲಸ ಮಾಡುತ್ತಿರುವುದರಿಂದ ಖಿನ್ನತೆ, ಆತ್ಮಹತ್ಯೆ, ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಗಳು ಹೆಚ್ಚುತ್ತಿವೆ. ಇದರಿಂದ ಉತ್ಪಾದಕತೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಈ ಒತ್ತಡವನ್ನು ಕಡಿಮೆ ಮಾಡಲು ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಅತ್ಯಗತ್ಯವಾಗಿದೆ ಎಂದರು. ಈಗಾಗಲೇ ಆರ್‌ಬಿಐ, ಎಲ್‌ಐಸಿ, ಸಾಮಾನ್ಯ ವಿಮಾ ಕಂಪನಿಗಳು, ಸೆಬಿ, ಷೇರು ಮಾರುಕಟ್ಟೆ, ವಿದೇಶಿ ವಿನಿಮಯ ಮಾರುಕಟ್ಟೆ ಸೇರಿದಂತೆ ಹಣಕಾಸು ವಲಯದ ಅನೇಕ ಸಂಸ್ಥೆಗಳು ವಾರದಲ್ಲಿ ಐದು ದಿನಗಳಷ್ಟೇ ಕಾರ್ಯನಿರ್ವಹಿಸುತ್ತಿವೆ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಈ ಪದ್ಧತಿ ಬಹಳ ಹಿಂದೆಯೇ ಜಾರಿಯಲ್ಲಿದೆ. ಹೀಗಿರುವಾಗ ಬ್ಯಾಂಕ್ ಸಿಬ್ಬಂದಿಯ ನ್ಯಾಯಯುತ ಬೇಡಿಕೆಯನ್ನು ಸರ್ಕಾರ ತಕ್ಷಣ ಈಡೇರಿಸಬೇಕು ಎಂದು ಒತ್ತಾಯಿಸಿದರು.ಮುಷ್ಕರ ಹಾಗೂ ಪ್ರತಿಭಟನಾ ಕಾರ್ಯಕ್ರಮದ ನೇತೃತ್ವವನ್ನು ಯು.ಎಫ್.ಬಿ.ಯು. ಹಾಸನ ಘಟಕದ ಸಂಚಾಲಕ ಆರ್. ಕುಮಾರ್ ವಹಿಸಿದ್ದರು. ಪ್ರತಿಭಟನೆಯಲ್ಲಿ ಕೆನರಾ ಬ್ಯಾಂಕ್ ಅಧಿಕಾರಿಗಳ ಸಂಘಟನೆ (ಸಿಬಿಒಎ) ಸಂಘಟನಾ ಕಾರ್ಯದರ್ಶಿ ಎ.ಜೆ. ಜಾವೀದ್, ಕೆನರಾ ಬ್ಯಾಂಕ್ ನೌಕರರ ಒಕ್ಕೂಟದ ವಲಯ ಕಾರ್ಯದರ್ಶಿ ಬಿ.ಕೆ.ವಿಶ್ವನಾಥ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ಸಂಘಟನೆಯ ಜಿ.ಟಿ. ಲೋಕೇಶ್, ಜಯಚಂದ್ರ, ಎಸ್‌ಬಿಐ ಸಿಬ್ಬಂದಿ ಸಂಘಟನೆಯ ಚೇತನ್, ಅಶೋಕ್ ಭಟ್, ಕರ್ನಾಟಕ ಬ್ಯಾಂಕ್‌ನ ಶೀಲಾ ಸೇರಿದಂತೆ ವಿವಿಧ ಬ್ಯಾಂಕ್‌ಗಳ ನೂರಾರು ಸಿಬ್ಬಂದಿ ಭಾಗವಹಿಸಿದ್ದರು.