ಬಳ್ಳಾರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನವಿರೋಧಿ ನೀತಿಯಲ್ಲಿ ತೊಡಗಿಸಿಕೊಂಡಿದ್ದು, ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದು ಆರೋಪಿಸಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ರಾಜ್ಯದಲ್ಲಿ ಬರಗಾಲ ಎದುರಾಗಿದ್ದು, ರಾಜ್ಯ ಸರ್ಕಾರ ನಿರ್ವಹಣೆಯಲ್ಲಿ ವಿಫಲವಾಗಿದೆ. ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಯಲ್ಲಿಲ್ಲ. ಈ ಯೋಜನೆಯು ಅನೇಕ ದೋಷಗಳಿಂದ ಕೂಡಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಇದರಿಂದ ರಾಜ್ಯ ಪ್ರಗತಿಯಲ್ಲಿ ತೀವ್ರ ಹಿನ್ನಡೆ ಕಂಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನಗರದ ಗಾಂಧಿ ಭವನದಿಂದ ಮೆರವಣಿಗೆ ಹೊರಟ ಪಕ್ಷದ ಕಾರ್ಯಕರ್ತರು, ರಾಯಲ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಇದೇ ವೇಳೆ ಎಸ್‌ಯುಸಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯಾ ಹಾಗೂ ಜಿಲ್ಲಾ ಸಮಿತಿ ಸದಸ್ಯ ಎ. ದೇವದಾಸ್ ಮಾತನಾಡಿದರು.ಹಸಿವಿನ ಸೂಚ್ಯಂಕದಲ್ಲಿ ಭಾರತ 111ನೇ ಸ್ಥಾನದಲ್ಲಿದೆ. ಇನ್ನೊಂದು ಕಡೆ ದೇಶದ ಶೇ. 77ರಷ್ಟು ಸಂಪತ್ತು ಶೇ. 10 ಮಂದಿ ಶ್ರೀಮಂತರ ಕೈಗಳಲ್ಲಿದೆ ಎಂದು ವರದಿಯಾಗಿದೆ. ಶ್ರೀಮಂತ ಕಾರ್ಪೊರೇಟ್ ಕಂಪನಿಗಳ ಆಶೀರ್ವಾದದಿಂದ ಅಧಿಕಾರಕ್ಕೆ ಬರುವ ಎಲ್ಲ ರಾಜಕೀಯ ಪಕ್ಷಗಳು ಅವರ ಪರವಾಗಿ ತರುವ ನೀತಿಗಳಿಂದಾಗಿ ದೇಶ ಈ ಸ್ಥಿತಿಗೆ ಬಂದಿದೆ ಎಂದು ದೂರಿದರು.
ಜಿಲ್ಲಾ ಪ್ರಮುಖರಾದ ಡಾ.ಪ್ರಮೋದ್, ನಾಗಲಕ್ಷ್ಮಿ, ಸೋಮಶೇಖರ್ ಗೌಡ, ಶಾಂತಾ, ಗೋವಿಂದ, ನಾಗರತ್ನ, ಪಂಪಾಪತಿ ಕೋಳೂರು, ಹನುಮಪ್ಪ, ಈಶ್ವರಿ, ಜಗದೀಶ್, ರಾಜ, ವಿಜಯಲಕ್ಷ್ಮಿ, ರವಿಕಿರಣ್ ಸೇರಿದಂತೆ ಪಕ್ಷದ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.