ಮಂಡ್ಯ: ತಮಿಳು ಕಾಲೋನಿ ನಿವಾಸಿಗಳ ವಾಸಕ್ಕೆಂದು ಅಂದಿನ ಮಹಾರಾಜರ ಆಡಳಿತದಲ್ಲಿ ಈ ಜಮೀನನ್ನು ಕೊಡುಗೆ ನೀಡಿದ್ದಾರೆ, ನಾವು ಈ ವಾಸಸ್ಥಳ ಖಾಲಿ ಮಾಡುವುದಿಲ್ಲ, ಹಾಗಾಗಿ ನಮ್ಮನ್ನು ಒಕ್ಕಲೆಬ್ಬಿಸಬಾರದು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ತಮಿಳು ನಿವಾಸಿಗಳು ಮತ್ತು ಜೈಭೀಮ್ ಸಂಘಟನೆಯ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಕೆಲವರು ನಮ್ಮನ್ನು ಖಾಲಿ ಮಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮಿಮ್ಸ್‌ನವರು 2010 ರಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, 2015 ರಲ್ಲಿ ತೆರವುಗೊಳಿಸಲು ಆದೇಶ ನೀಡಿದ ನಂತರ ನಾವೆಲ್ಲರೂ ಹೈಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದಿರುತ್ತೇವೆ. ಇಷ್ಟಿದ್ದರೂ ನಮ್ಮನ್ನು ಖಾಲಿ ಮಾಡಿಸಲು ಪ್ರಯತ್ನಿಸಿರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ತಮಿಳು ಕಾಲೋನಿಯ ನಿವಾಸಿಗಳು ಒಟ್ಟು 251 ಕುಟುಂಬಗಳು ವಾಸಿಸುತ್ತಿದ್ದಾರೆ, ಹೈಕೋರ್ಟ್‌ನಲ್ಲಿ ಹಲವು ಬಾರಿ ನಮ್ಮ ಪರವಾಗಿಯೇ ಆದೇಶ ಬಂದಿದೆ. ಈ ಸ್ಥಳಕ್ಕೆ ಸಂಬಂಧಿಸಿದಂತೆ ಹಲವು ಅಗತ್ಯ ದಾಖಲೆಗಳನ್ನು ನಾವು ಹೊಂದಿದ್ದೇವೆ. ಇದನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿ ನಮಗೆ ನ್ಯಾಯ ದೊರಕಿಸಬೇಕು ಎಂದು ಮನವಿ ಮಾಡಿದರು.ಸಂಘಟನೆಯ ವೆಂಕಟೇಶ್, ವಿಜಯಕಾಂತ್, ಪ್ರಕಾಶ್, ನಿವಾಸಿಗಳಾದ ಅನ್‌ಬಳಗನ್, ಏಳುಮಲೈ, ಶ್ರೀಕಾಂತ್, ಸುರೇಶ್, ಮುರುಗನ್, ಕೊಂಗನಾಥ್ ಭಾಗವಹಿಸಿದ್ದರು.