ನಿರ್ದೇಶಕರನ್ನು ವಜಾ ಮಾಡುವಂತೆ ಗ್ರಾಮಸ್ಥರಿಂದ ಪ್ರತಿಭಟನೆ

KannadaprabhaNewsNetwork |  
Published : Jan 17, 2026, 02:15 AM IST
51 | Kannada Prabha

ಸಾರಾಂಶ

ಬೆಟ್ಟದಪುರ ಸಮೀಪದ ಕೋಮಲಾಪುರ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ಕಾನೂನು ಬಾಹಿರವಾಗಿ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆದಿದೆ ಹಾಗೂ ಆಯ್ಕೆ ಮಾಡಿರುವ ನಿರ್ದೇಶಕರನ್ನು ವಜಾ ಮಾಡುವಂತೆ ಗ್ರಾಮಸ್ಥರಿಂದ ಪ್ರತಿಭಟನೆ.

ಕನ್ನಡಪ್ರಭ ವಾರ್ತೆ ಬೆಟ್ಟದಪುರ

ಸಮೀಪದ ಕೋಮಲಾಪುರ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ಕಾನೂನು ಬಾಹಿರವಾಗಿ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆದಿದೆ ಹಾಗೂ ಆಯ್ಕೆ ಮಾಡಿರುವ ನಿರ್ದೇಶಕರನ್ನು ವಜಾ ಮಾಡುವಂತೆ ಗ್ರಾಮಸ್ಥರು ಶುಕ್ರವಾರ ಪ್ರತಿಭಟಿಸಿದರು.

ಗ್ರಾಮದ ಬಸವೇಶ್ವರ ದೇವಾಲಯದ ಮುಂಭಾಗ ಆಡಳಿತ ಮಂಡಳಿ ವಿರುದ್ಧ ಗ್ರಾಮಸ್ಥರು ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಮುಖಂಡ ಪಟೇಲ್ ರಾಜೇಗೌಡ ಮಾತನಾಡಿ, ಹಾಲಿನ ಡೇರಿ ಚುನಾವಣೆ ನಾಮಪತ್ರ ಸಲ್ಲಿಸುವ ಸಮಯದಲ್ಲಿ 11 ನಿರ್ದೇಶಕರ ಆಯ್ಕೆ ಸಂಬಂಧ 31 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಅದರಲ್ಲಿ ಪ್ರವರ್ಗ ಎ ವರ್ಗದಲ್ಲಿ ಕೆ.ಎಂ. ಶಿವಣ್ಣ, ಪ್ರವರ್ಗ ಬಿನಲ್ಲಿ ಶಿವಣ್ಣ ನಾಮಪತ್ರ ಸಲ್ಲಿಸಿರುತ್ತಾರೆ, ಆದರೆ ಆಯ್ಕೆಯಲ್ಲಿ ಇವರಿಬ್ಬರನ್ನು ಸಾಮಾನ್ಯ ಕ್ಷೇತ್ರ ಎಂದು ಅವಿರೋಧವಾಗಿ ಆಯ್ಕೆ ಮಾಡಿ, ಚುನಾವಣೆಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಕಿಡಿಕಾರಿದರು.

ಇದಲ್ಲದೇ ಅಧ್ಯಕ್ಷರನ್ನು ಗ್ರಾಮಸ್ಥರ ಒಮ್ಮತದಲ್ಲಿ ಆಯ್ಕೆ ಮಾಡುವ ಒಪ್ಪಂದವಾಗಿತ್ತು, ಆಯ್ಕೆಯಾದ ಅಧ್ಯಕ್ಷರು ಗ್ರಾಮದ ದೊಡ್ಡಮ್ಮತಾಯಿ ದೇವಸ್ಥಾನಕ್ಕೆ ವೈಯಕ್ತಿಕವಾಗಿ ಅನುದಾನ ನೀಡಬೇಕೆಂಬ ವಿಚಾರವನ್ನು ತಿಳಿಸಿ, ಆಯ್ಕೆ ಪ್ರಕ್ರಿಯೆ ನಡೆಯಬೇಕಿತ್ತು, ಆದರೆ ಕೆಲವರು ರಾಜಕೀಯವನ್ನು ಬೆರೆಸಿ ಕೆಲ ನಿರ್ದೇಶಕರನ್ನು ಪ್ರವಾಸಕ್ಕೆ ಕಳುಹಿಸಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಇದರಿಂದ ಗ್ರಾಮದಲ್ಲಿ ಶಾಂತಿ ಭಂಗ ಉಂಟಾಗಿ ವೈಮನಸ್ಸು ಬೆಳೆಯಲು ಕಾರಣವಾಗುತ್ತಿದೆ ಎಂದು ಆರೋಪಿಸಿದ್ದರು.

ಗ್ರಾಮದ ಮುಖಂಡ ನವೀನ್ ಮಾತನಾಡಿ, ಕೋಮಲಾಪುರ ಗ್ರಾಮದಲ್ಲಿ ಸುಮಾರು 400 ರಿಂದ 450 ಒಕ್ಕಲಿಗ ಸಮುದಾಯದ ಜನರಿದ್ದು, ಎಲ್ಲ ಸಮುದಾಯದವರೊಂದಿಗೆ ಅನ್ಯೂನ್ಯವಾಗಿ ಇದ್ದೇವೆ, ಆದರೆ ಸ್ಥಳೀಯ ಜನಪ್ರತಿನಿಧಿಗಳು ಕೆಲವು ಸಮುದಾಯಗಳನ್ನು ಉಳಿಸುವ ಪ್ರಯತ್ನದಲ್ಲಿ ನಮ್ಮನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಗ್ರಾಮದ ಮುಖಂಡ ಗಣೇಶ್ ಮಾತನಾಡಿ, ನಮ್ಮ ಗ್ರಾಮದ ಸುಮಾರು 450ಕ್ಕೂ ಹೆಚ್ಚು ಕುಟುಂಬದವರು ಒಮ್ಮತದಿಂದ ಕಾಂಗ್ರೆಸ್ ನ್ನು ತೊರೆಯುತ್ತಿದ್ದೇವೆ, ಗ್ರಾಮದಲ್ಲಿ ಪಕ್ಷ ಭೇದ ಮರೆತು, ಗ್ರಾಮದ ಅಭಿವೃದ್ಧಿ ಹಾಗೂ ದೇವಾಲಯದ ಅಭಿವೃದ್ಧಿಗೆ ಗ್ರಾಮಸ್ಥರೆಲ್ಲರೂ ಜೊತೆಗೂಡಿದ್ದೇವು, ಕೆಲವರ ದ್ವೇಷ ರಾಜಕಾರಣದಿಂದ ಬೇಸತ್ತು ಈ ತೀರ್ಮಾನ ಮಾಡಲಾಗಿದೆ ಎಂದರು.

ಕಾಯ್ದೆ, ನಿಯಮಗಳ ಅನ್ವಯ ಚುನಾವಣೆ ನಡೆದಿದೆ:

ಈ ವಿಚಾರಕ್ಕೆ ಸಂಬಂಧಪಟ್ಟಂತೆ ರಿಟರ್ನಿಂಗ್ ಆಫೀಸರ್ ಸಿ.ಎನ್. ಗಿರೀಶ್ ಪ್ರತಿಕ್ರಿಯೆ ನೀಡಿ ನಿರ್ದೇಶಕರ ಆಯ್ಕೆಯಲ್ಲಿ ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳ ಅನ್ವಯ ಚುನಾವಣೆಯನ್ನು ನಡೆಸಲಾಗಿದೆ, ಪ್ರವರ್ಗ. ಎ ಮತ್ತು ಪ್ರವರ್ಗ.ಬಿ ಕ್ಷೇತ್ರದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಅಭ್ಯರ್ಥಿಗಳಿಗೆ ಅರಿವಿಲ್ಲದೆ ಸಾಮಾನ್ಯ ಕ್ಷೇತ್ರ ಆಯ್ಕೆ ಮಾಡುವ ಬದಲು, ಪ್ರವರ್ಗ ಎ ಮತ್ತು ಬಿ ಎಂದು ಗುರುತು ಮಾಡಿದ್ದರು, ಈ ವಿಚಾರವಾಗಿ ಸಭೆ ಕರೆದು ಆಡಳಿತ ಮಂಡಳಿಯ ತೀರ್ಮಾನದಂತೆ ನಡೆದುಕೊಂಡಿದ್ದೇವೆ ಎಂದರು.

ಸುದೇಶ್, ಈರೇಗೌಡ, ಅನಿಲ್, ಕೆ.ಕೆ. ಶಿವಣ್ಣ, ಶಿವಣ್ಣಚಾರಿ, ಯೋಗೇಶ್, ಶ್ರೀನಿವಾಸ್, ಕರಿನಾಯಕ, ಸ್ವಾಮಿಗೌಡ, ಸತೀಶ್, ಶ್ರೀನಿವಾಸ, ಮಂಜು, ಅಭಿ, ವೀರಭದ್ರಗೌಡ, ಸಣ್ಣೇಗೌಡ, ಪ್ರಸನ್ನ, ಕೃಷ್ಣೇಗೌಡ, ರಾಮೇಗೌಡ, ನಾಗೇಶ್ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂದಾರ ಶಾಲೆಯಲ್ಲಿ ಸುಗ್ಗಿ ಹಬ್ಬದ ಸಂಭ್ರಮ
ಮೂಡುಬಿದಿರೆ ಸಿಂಥೆಟಿಕ್ ಟ್ರ್ಯಾಕ್ ಗೆ 11 ವರ್ಷ ಕ್ರೀಡಾಭಿಮಾನಿಗಳ ಹರ್ಷ