ಸಂಸದ ಪ್ರಜ್ವಲ್ ರೇವಣ್ಣ ಬಂಧಿಸುವಂತೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

KannadaprabhaNewsNetwork |  
Published : May 06, 2024, 12:35 AM IST
5ಕೆಎಂಎನ್ ಡಿ20 | Kannada Prabha

ಸಾರಾಂಶ

ಪ್ರಜ್ವಲ್ ರೇವಣ್ಣನಿಗೆ ವೀಸಾ ಸಿಗುವಂತೆ ಪ್ರಭಾವ ಬೀರಿದವರು ಯಾರು ಎಂಬ ಬಗ್ಗೆ ಎಸ್‌ಐಟಿ ತನ್ನ ತನಿಖೆಯ ವ್ಯಾಪ್ತಿಗೆ ತೆಗೆದುಕೊಳ್ಳಬೇಕು. ಅಂತಹವರನ್ನೂ ಆರೋಪಿಯೆಂದು ಪರಿಗಣಿಸಬೇಕು. ಪ್ರಕರಣದಲ್ಲಿ ಸಂತ್ರಸ್ತರಿಗೆ ಬಲಾಢ್ಯರಿಂದ ಅಪಾಯವಿದ್ದು ರಕ್ಷಣೆ ನೀಡಬೇಕು. ಹೆಣ್ಣು ಮಕ್ಕಳ ಗೌಪ್ಯತೆಗೆ ಧಕ್ಕಯಾಗದಂತೆ ಅತ್ಯಂತ ಸೂಕ್ಷ್ಮವಾಗಿ ತನಿಖೆ ನಡೆಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ, ಸಂಸದ ಪ್ರಜ್ವಲ್ ರೇವಣ್ಣನನ್ನು ಬಂಧಿಸುವಂತೆ ಆಗ್ರಹಿಸಿ ಜಿಲ್ಲೆಯ ಮಹಿಳೆಯರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾನುವಾರ ಸಂಜೆ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಪೆನ್ ಡ್ರೈವ್ ಪ್ರಕರಣದಲ್ಲಿ ಸಿಲುಕಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ನನ್ನು ಕರೆತಂದು ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿದರು.

ಪ್ರಕರಣದಲ್ಲಿ ಸಂತ್ರಸ್ತರಿಗೆ ಬಲಾಢ್ಯರಿಂದ ಅಪಾಯವಿದ್ದು ರಕ್ಷಣೆ ನೀಡಬೇಕು. ಹೆಣ್ಣು ಮಕ್ಕಳ ಗೌಪ್ಯತೆಗೆ ಧಕ್ಕಯಾಗದಂತೆ ಅತ್ಯಂತ ಸೂಕ್ಷ್ಮವಾಗಿ ತನಿಖೆ ನಡೆಸಬೇಕು. ಸುಭದ್ರತೆ ಮತ್ತು ಘನತೆಯಿಂದ ಜೀವನ ಮುಂದುವರೆಸಲು ಅವಕಾಶವಾಗಬೇಕು ಎಂದು ಒತ್ತಾಯಿಸಿದರು.

ಪ್ರಜ್ವಲ್ ರೇವಣ್ಣನಿಗೆ ವೀಸಾ ಸಿಗುವಂತೆ ಪ್ರಭಾವ ಬೀರಿದವರು ಯಾರು ಎಂಬ ಬಗ್ಗೆ ಎಸ್‌ಐಟಿ ತನ್ನ ತನಿಖೆಯ ವ್ಯಾಪ್ತಿಗೆ ತೆಗೆದುಕೊಳ್ಳಬೇಕು. ಅಂತಹವರನ್ನೂ ಆರೋಪಿಯೆಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕದಲ್ಲಿ ನಡೆದಿರುವ ಮಹಿಳೆಯರ ಮೇಲಿನ ಎಲ್ಲ ದೌರ್ಜನ್ಯದ ಪ್ರಕರಣಗಳ ನಿಷ್ಪಕ್ಷಪಾತ ತನಿಖೆ ಮತ್ತು ಶಿಕ್ಷೆಯನ್ನು ಖಾತ್ರಿಪಡಿಸಲು, ಇಂತಹ ಘಟನೆಗಳನ್ನು ನಿಯಂತ್ರಿಸಲು ಉನ್ನತ ಮಟ್ಟದ ಸಮಿತಿಯನ್ನು ಸರ್ಕಾರ ರಚಿಸಬೇಕು ಎಂದು ಒತ್ತಾಯಿಸಿದರು.

ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣರ ಹೆಸರೂ ಕೇಳಿಬಂದಿದೆ. ಸಾಕ್ಷಿಯೊಬ್ಬರನ್ನು ಅಪಹರಿಸಲು ಪ್ರಯತ್ನಿಸಿದ ಆರೋಪದ ಮೇಲೆ ಬಂಧನವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪ್ರೊ.ಜಿ.ಟಿ.ವೀರಪ್ಪ, ರೈತಸಂಘದ ಲಿಂಗಾಪ್ಪಾಜಿ, ವಿಜಯ ಕುಮಾರ್, ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಪೂರ್ಣಿಮ, ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ಜಾಗೃತ ಕರ್ನಾಟಕದ ಎನ್.ನಾಗೇಶ್, ಸುಬ್ರಮಣ್ಯ, ಮುಖಂಡರಾದ ನಗರಕೆರೆ ಜಗದೀಶ್, ಮಹಿಳಾ ಮುನ್ನಡೆಯ ಶಿಲ್ಪ, ಸೌಮ್ಯ, ಮುಖಂಡರಾದ ರಾಧಾಮಣಿ. ಹನುಮಂತಯ್ಯ ಸೇರಿದಂತೆ ಹಲವರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ