ಕೆರೆಯಲ್ಲಿ ಹೂಳು ತೆಗೆಯುಲು ತಡೆ ಖಂಡಿಸಿ ಗ್ರಾಪಂ ಸದಸ್ಯರಿಂದ ಪ್ರತಿಭಟನೆ

KannadaprabhaNewsNetwork | Published : Apr 3, 2024 1:37 AM

ಸಾರಾಂಶ

ಭುಜುವಳ್ಳಿ, ಕಪರೆ ಕೊಪ್ಪಲು ಸೇರಿದಂತೆ ಇತರೆ ಗ್ರಾಮಗಳಲ್ಲಿರುವ ಕೆರೆಗಳಲ್ಲಿ ರೈತರು ಹೂಳು ತೆಗೆದು ತಮ್ಮ ಜಮೀನುಗಳಿಗೆ ಕೆರೆ ಗೋಡು ಮಣ್ಣನ್ನು ಹೊಡೆದುಕೊಳ್ಳುತ್ತಿದ್ದಾರೆ. ಆದರೆ, ಕಾಡುಕೊತ್ತನಹಳ್ಳಿ ಕೆರೆ ರೈತರು ಹೂಳನ್ನು ತೆಗೆಯಲು ಮುಂದಾದಾಗ ರೈತರನ್ನು ಪಿಡಿಒ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಕೆರೆ ಹೂಳು ತುಂಬಿಕೊಂಡು ನೀರು ಸಂಗ್ರಹಣಾ ಸಾಮರ್ಥ್ಯ ಕಳೆದುಕೊಂಡಿದೆ. ಪ್ರಸ್ತುತ ಬರಗಾಲ ಆವರಿಸಿದೆ. ಕೆರೆಯಲ್ಲಿ ನೀರಿಲ್ಲದ ಅಂತರ್ಜಲದ ಕುಸಿತವಾಗಿದೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಕೆರೆಯಲ್ಲಿ ಹೂಳು ತೆಗೆಯುತ್ತಿರುವುದನ್ನು ತಡೆದ ಗ್ರಾಪಂ ಅಧಿಕಾರಿಗಳ ಕ್ರಮ ಖಂಡಿಸಿ ಕಾಡುಕೊತ್ತನಹಳ್ಳಿ ಗ್ರಾಪಂ ಸದಸ್ಯರು, ರೈತರೊಂದಿಗೆ ಪ್ರತಿಭಟನೆ ನಡೆಸಿದರು.

ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿದ ಕೆಲ ಸದಸ್ಯರು, ರೈತರು ಹಾಗೂ ಗ್ರಾಮಸ್ಥರು ಪಿಡಿಒ, ಕಾರ್ಯದರ್ಶಿಗಳ ವಿರುದ್ಧ ಘೋಷಣೆ ಕೂಗಿ ಹೂಳು ತೆಗೆಯಲು ಅನುಮತಿ ನೀಡಬೇಕೆಂದು ಆಗ್ರಹಿಸಿದರು.

ಗ್ರಾಪಂ ಸದಸ್ಯ ಕೆ.ಎಸ್.ದಯಾನಂದ್ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಭುಜುವಳ್ಳಿ, ಕಪರೆ ಕೊಪ್ಪಲು ಸೇರಿದಂತೆ ಇತರೆ ಗ್ರಾಮಗಳಲ್ಲಿರುವ ಕೆರೆಗಳಲ್ಲಿ ರೈತರು ಹೂಳು ತೆಗೆದು ತಮ್ಮ ಜಮೀನುಗಳಿಗೆ ಕೆರೆ ಗೋಡು ಮಣ್ಣನ್ನು ಹೊಡೆದುಕೊಳ್ಳುತ್ತಿದ್ದಾರೆ. ಆದರೆ, ಕಾಡುಕೊತ್ತನಹಳ್ಳಿ ಕೆರೆ ರೈತರು ಹೂಳನ್ನು ತೆಗೆಯಲು ಮುಂದಾದಾಗ ರೈತರನ್ನು ಪಿಡಿಒ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆರೆ ಹೂಳು ತುಂಬಿಕೊಂಡು ನೀರು ಸಂಗ್ರಹಣಾ ಸಾಮರ್ಥ್ಯ ಕಳೆದುಕೊಂಡಿದೆ. ಪ್ರಸ್ತುತ ಬರಗಾಲ ಆವರಿಸಿದೆ. ಕೆರೆಯಲ್ಲಿ ನೀರಿಲ್ಲದ ಅಂತರ್ಜಲದ ಕುಸಿತವಾಗಿದೆ. ಆದರೂ ಗ್ರಾಪಂ ಅಧಿಕಾರಿಗಳು ಕೆರೆಯಲ್ಲಿ ರೈತರು ಹೂಳು ತೆಗೆದುಕೊಳ್ಳಲು ಮುಂದಾದಾಗ ಅವರಿಗೆ ಬೆದರಿಕೆ ಹಾಕುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು.

ಈ ಬಗ್ಗೆ ಸ್ಥಳೀಯ ಶಾಸಕರಿಗೆ, ಜಿಲ್ಲಾಧಿಕಾರಿಗಳು, ಜಿಪಂ, ಕಾಡಾ ಅಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸಲಾಗಿದೆ. ಎಲ್ಲ ಅಧಿಕಾರಿಗಳೂ ಕೆರೆ ಹೂಳು ತೆಗೆಯಲು ರೈತರಿಗೆ ಅವಕಾಶ ನೀಡಬೇಕೆಂದು ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಎರಡು ಮೂರು ಗ್ರಾಪಂ ಸದಸ್ಯರ ಮಾತಿಗೆ ಮನ್ನಣೆ ನೀಡುವ ಮೂಲಕ ರೈತರಿಗೆ ತೊಂದರೆ ಕೊಟ್ಟು ಬೆದರಿಕೆ ಹಾಕುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿದರು.

ಈ ಕೂಡಲೇ ಶಾಸಕರು, ಜಿಲ್ಲಾ ಮತ್ತು ತಾಲೂಕು ಆಡಳಿತ ಮಧ್ಯ ಪ್ರವೇಶಿಸಿ ರೈತರಿಗೆ ಕೆರೆಯಲ್ಲಿನ ಹೂಳನ್ನು ತೆಗೆದು ತಮ್ಮ ಜಮೀನುಗಳಿಗೆ ಸಾಗಿಸಿಕೊಳ್ಳಲು ಅನಿವು ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಈ ವೇಳೆ ಗ್ರಾಪಂ ಸದಸ್ಯ ಕೆಂಪರಾಜು ಮಾತನಾಡಿ, ಕೆರೆಯಲ್ಲಿ ಹೂಳು ತುಂಬಲು ರೈತರಿಗೆ ಯಾರೂ ಬೆದರಿಕೆ ಒಡ್ಡಿಲ್ಲ. ಅಧಿಕಾರಿಗಳು ಬೆದರಿಕೆ ಹಾಕಲು ಬಿಡುವುದಿಲ್ಲ. ಕೆಲ ಕಿಡಿಗೇಡಿಗಳು ಮಾಡಿರುವ ಕುತಂತ್ರದಿಂದ ರೈತರಿಗೆ ತೊಂದರೆಯಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯ ನವೀನ್, ಮಾಜಿ ಅಧ್ಯಕ್ಷ ಸೋಮಣ್ಣ, ರೈತ ಮುಖಂಡರಾದ ಪ್ರಕಾಶ್, ಸುನಿಲ್, ರಾಜು, ಸಿದ್ಧರಾಜು, ಶಂಕರ್, ಮಹದೇವಯ್ಯ, ಸ್ವಾಮಿ(ಕದರ) ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Share this article