ಬ್ಯಾಡಗಿ: ಪಟ್ಟಣದ ಮುಖ್ಯ ರಸ್ತೆಯಲ್ಲಿ ಹಾದು ಹೋಗಿರುವ ಗಜೇಂದ್ರಗಡ ಸೊರಬ ರಾಜ್ಯ ಹೆದ್ದಾರಿ ಅಭಿವೃದ್ಧಿಗೊಳಿಸುವಂತೆ ಆಗ್ರಹಿಸಿ ಮುಖ್ಯರಸ್ತೆ ಅಗಲೀಕರಣ ಹೋರಾಟ ಸಮಿತಿ ಸದಸ್ಯರು ಹಾಗೂ ಪಟ್ಟಣದ ರೈತರು, ಕೆರೆಯಂತಾಗಿರುವ ಮುಖ್ಯ ರಸ್ತೆಯ ನೀರಿನಲ್ಲಿಯೇ ಎಮ್ಮೆಗಳ ಮೈತೊಳೆದು ಬುಧವಾರ ವಿನೂತನವಾಗಿ ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದರು.
ಪಟ್ಟಣದ ಮುಖ್ಯರಸ್ತೆಯಲ್ಲಿ ಮಧ್ಯಾಹ್ನ ೨ ಗಂಟೆ ಸುಮಾರಿಗೆ ಏಕಾಏಕಿ ಎಮ್ಮೆಗಳೊಂದಿಗೆ ಆಗಮಿಸಿದ ಮುಖ್ಯ ರಸ್ತೆ ಅಗಲೀಕರಣ ಹೋರಾಟ ಸಮಿತಿ ಸದಸ್ಯರು ಹಾಗೂ ರೈತರು ತಗ್ಗು-ಗುಂಡಿಗಳಿಂದ ತುಂಬಿ ಹೋಗಿರುವ ರಸ್ತೆಯಲ್ಲಿ ನಿಂತಿದ್ದ ನೀರಿನಲ್ಲಿ ಎಮ್ಮೆ ಮೈತೊಳೆದು ಜನಪ್ರತಿನಿಧಿಗಳು, ಪಿಡಬ್ಲ್ಯೂಡಿ ಅಧಿಕಾರಿಗಳು ಹಾಗೂ ಪಟ್ಟಣದ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಲೇ ಬಂದಿರುವ ಜನರ ವಿರುದ್ಧ ಆಕ್ರೋಶ ಹೊರಹಾಕಿದರು.ಎಮ್ಮೆಗಿಂತ ಕಡೆ: ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಶಿವು ಕಲ್ಲಾಪುರ, ಪಟ್ಟಣದ ಮುಖ್ಯರಸ್ತೆ ಅಗಲೀಕರಣಕ್ಕಾಗಿ ೧೫ ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಆದರೆ ಯಾವ ಪಕ್ಷದ ಅಧಿಕಾರಕ್ಕೆ ಬಂದರೂ ಮುಕ್ತಿ ಸಿಕ್ಕಿಲ್ಲ. ರಸ್ತೆ ಸಂಪುರ್ಣ ಹಾಳಾಗಿ ರಸ್ತೆ ಕೆಸರುಗದ್ದೆಯಂತಾಗಿದ್ದರೂ ಪಿಡಬ್ಲ್ಯೂಡಿ ಅಧಿಕಾರಿಗಳು ಜವಾಬ್ದಾರಿ ಮರೆತು ಕುಳಿತಿದ್ದಾರೆ ಎಂದರು.
ಈಶ್ವರ್ ಮಠದ ಮಾತನಾಡಿ, ಮುಖ್ಯ ರಸ್ತೆಯಲ್ಲಿರುವ ಕೆಲವೇ ಕೆಲವು ಅಭಿವೃದ್ಧಿಹೀನ ಮನಸ್ಥಿತಿಯ ಜನರ ಸ್ವ ಹಿತಾಸಕ್ತಿಗೆ ಬ್ಯಾಡಗಿ ಜನತೆ ಪರಿತಪಿಸುವಂತಾಗಿದೆ ಎಂದು ದೂರಿದರು.ಅಗಲೀಕರಣ ಸಮಿತಿ ಅಧ್ಯಕ್ಷ ಸುರೇಶ ಚಲವಾದಿ ಮಾತನಾಡಿ, ಮುಖ್ಯರಸ್ತೆ ಅಗಲೀಕರಣ ಮಾಡದೇ ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಸುಳ್ಳು ಹೇಳುತ್ತಾ ಅಧಿಕಾರಿಗಳು ಕಾಲ ಕಳೆಯುತ್ತಿದ್ದಾರೆ. ನಿಯಮಾನುಸಾರ ಯಾವುದೇ ಕಾನೂನು ಪ್ರಕ್ರಿಯೆ ಮಾಡದೇ ಇರುವ ಕಾರಣ ಅಧಿಕಾರಿಗಳ ತಪ್ಪಿನಿಂದಾಗಿ ಸಾಕಷ್ಟು ಬಾರಿ ರಸ್ತೆ ಅಗಲೀಕರಣ ಪ್ರಕ್ರಿಯೆ ನಿಂತು ಹೋಗಿದೆ. ಆರು ತಿಂಗಳ ಹಿಂದೆ ನಡೆದ ಸಭೆಯಲ್ಲಿ ಶಾಸಕರು ಮುಂದಿನ ಆ. ೧೫ರ ಒಳಗಾಗಿ ಮುಖ್ಯರಸ್ತೆ ಅಗಲೀಕರಣ ಮಾಡುವುದಾಗಿ ಭರವಸೆಯನ್ನು ನೀಡಿದ್ದರು. ಆದರೆ ಅದು ಸಹ ಈಡೇರುವ ಲಕ್ಷಣಗಳು ಕಾಣುತ್ತಿಲ್ಲ. ಆದ್ದರಿಂದ ಆ. ೧೫ರ ವರೆಗೆ ಹಂತ ಹಂತವಾಗಿ ಹೋರಾಟ ಮಾಡಿ, ಆನಂತರ ಎರಡು ಬದಿಗಳಲ್ಲಿ ಜೆಸಿಬಿಯಿಂದ ದೊಡ್ಡ ತಗ್ಗುಗಳನ್ನು ತೆಗೆದು ೭೫೦ ಮೀಟರ್ ರಸ್ತೆ ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದರು.ಪುರಸಭೆ ಸದಸ್ಯ ಸುಭಾಸ ಮಾಳಗಿ, ಬಿಜೆಪಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ, ಸುರೇಶ್ ಕುಡುಕೆರ, ಪಾಂಡುರಂಗ ಸುತಾರ, ಫರೀದಾಬಾನು ನದಿಮುಲ್ಲಾ, ಜೈ ಕರ್ನಾಟಕ ಸಂಘದ ಅಧ್ಯಕ್ಷ ವಿನಾಯಕ ಕಂಬಳಿ, ಮೋನಹ ಬಿನ್ನಾಳ ಭಾಗವಹಿಸಿದ್ದರು.ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಅಗಲೀಕರಣ ನಿಯಮಗಳು ಹಾಗೂ ಕಾನೂನು ಗೊತ್ತಿಲ್ಲ ಎನ್ನುವ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ. ಅಗಲೀಕರಣ ಬೇಡ ಎನ್ನುವವರ ಜತೆಗೂಡಿ ಅವರ ಕೈಗೊಂಬೆಗಳಂತೆ ಕಾರ್ಯನಿರ್ವಹಿಸುತ್ತ ರಸ್ತೆಯನ್ನು ದುರಸ್ತಿ ಸಹ ಮಾಡದೇ ಸಾರ್ವಜನಿಕರಿಗೆ ನಿತ್ಯ ನರಕ ದರ್ಶನ ಮಾಡಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಪಾಂಡುರಂಗ ಸುತಾರ ಹೇಳಿದರು.