ಹಿಂದೂ ಕಾರ್ಯಕರ್ತನಿಗೆ ಹಲ್ಲೆ ಖಂಡಿಸಿ ಪ್ರತಿಭಟನೆ

KannadaprabhaNewsNetwork | Published : Apr 10, 2025 1:16 AM

ಸಾರಾಂಶ

ಹಿಂದೂ ಸಂಘಟನೆಯ ಕಾರ್ಯಕರ್ತ, ಆಟೋ ಚಾಲಕ ಶ್ರೀನಿವಾಸ ನಾಯ್ಕ ಅವರನ್ನು ಎಸ್ಪಿ ಎಂ.ನಾರಾಯಣ ವಿಚಾರಣೆಗೆ ಕರೆಸಿ ಹಲ್ಲೆ ನಡೆಸಿದ್ದಾರೆ

ಭಟ್ಕಳ: ಹಿಂದೂ ಸಂಘಟನೆಯ ಕಾರ್ಯಕರ್ತ, ಆಟೋ ಚಾಲಕ ಶ್ರೀನಿವಾಸ ನಾಯ್ಕ ಅವರನ್ನು ಎಸ್ಪಿ ಎಂ.ನಾರಾಯಣ ವಿಚಾರಣೆಗೆ ಕರೆಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಇಲ್ಲಿನ ಹಿಂದೂ ಸಂಘಟನೆಯ ಕಾರ್ಯಕರ್ತರು ಬುಧವಾರ ನಗರ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಶ್ರೀನಿವಾಸ ಅವರನ್ನು ಶಿರಸಿಗೆ ಕರೆಸಿಕೊಂಡು ಹಲ್ಲೆ ಮಾಡಿದ್ದಾರೆ ಎನ್ನುವುದು ಕಾರ್ಯಕರ್ತರ ಗಂಭೀರ ಆರೋಪವಾಗಿದೆ. ಘಟನೆಯನ್ನು ಖಂಡಿಸಿ ಕಾರ್ಯಕರ್ತರು ಮಂಗಳವಾರ ತಡರಾತ್ರಿ ಠಾಣೆ ಎದುರು ಪ್ರತಿಭಟಿಸಿದರು. ತಡರಾತ್ರಿಯಾಗಿದ್ದರಿಂದ ಮುಖಂಡರು ಮನವೊಲಿಸಿದ್ದರು. ಬುಧವಾರ ಬೆಳಗ್ಗೆ ಮತ್ತೆ ಪ್ರತಿಭಟನೆ ಶುರುವಾಯಿತು. ನೂರಾರು ಕಾರ್ಯಕರ್ತರು ಜಮಾಯಿಸಿ ಎಸ್ಪಿಗೆ ಧಿಕ್ಕಾರ ಕೂಗಿದರು. ಕಾಯಕರ್ತಗೆ ಹೊಡೆದಿದ್ದಕ್ಕೆ ಸೂಕ್ತ ಸ್ಪಷ್ಟನೆ ಕೊಟ್ಟು, ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ವೇಳೆ ಠಾಣೆಗೆ ಆಗಮಿಸಿದ ಎಸ್ಪಿ ನಾರಾಯಣ ಪ್ರಮುಖರ ಸಭೆ ನಡೆಸಿದರು. ಈ ವೇಳೆ ಪ್ರಮುಖರಷ್ಟೇ ಸಭೆಯಲ್ಲಿದ್ದರು. ಬಳಿಕ ಸಭೆಯಿಂದ ಹೊರಬಂದ ಪ್ರಮುಖರು, ಎಸ್ಪಿ ಸ್ಪಷ್ಟನೆ ನೀಡಿದ್ದಾರೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹಿಂದೂ ಸಮಾಜಕ್ಕಾಗಿ ಹೋರಾಡಿದವರ ಮೇಲೆ ಗೂಂಡಾ ಕಾಯ್ದೆ ಹಾಕುವುದು ಸರಿಯಲ್ಲ ಎಂದು ಎಸ್ಪಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು. ಈ ವೇಳೆ ಪ್ರತಿಭಟನಾಕಾರರನ್ನು ಮನವೊಲಿಸಲಾಯಿತು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಮಾಜಿ ಶಾಸಕ ಸುನೀಲ ನಾಯ್ಕ, ಗೋವಿಂದ ನಾಯ್ಕ, ಸುಬ್ರಾಯ ದೇವಡಿಗ, ಈಶ್ವರ ನಾಯ್ಕ, ದಿನೇಶ ನಾಯ್ಕ, ರಾಜೇಶ ನಾಯ್ಕ, ಸುಬ್ರಾಯ ದೇವಡಿಗ, ಶ್ರೀಕಾಂತ ನಾಯ್ಕ, ಸುರೇಶ ನಾಯ್ಕ, ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ಜಯಂತ ನಾಯ್ಕ, ಕಾರ್ಯದರ್ಶಿ ನಾಗೇಶ ನಾಯ್ಕ, ವಿಎಚ್‌ಪಿ ಅಧ್ಯಕ್ಷ ರಾಮಕೃಷ್ಣ ನಾಯ್ಕ, ಕೃಷ್ಣಾ ನಾಯ್ಕ ಆಸರಕೇರಿ ನೂರಾರು ಕಾರ್ಯಕರ್ತರಿದ್ದರು.

ಹಲ್ಲೆ ಮಾಡಿಲ್ಲ, ಎಚ್ಚರಿಕೆ ನೀಡಿದ್ದೇನೆ: ಎಸ್ಪಿ ಸ್ಪಷ್ಟನೆ

ಭಟ್ಕಳದ ಶ್ರೀನಿವಾಸ ನಾಯ್ಕಗೆ ಹಲ್ಲೆ ಮಾಡಿದ್ದೇನೆ ಎಂಬ ಆರೋಪ ಕೇಳಿ ಬಂದಿದೆ. ಇದು ಸುಳ್ಳು ಎಂದು ಎಸ್ಪಿ ಎಂ.ನಾರಾಯಣ ಸ್ಪಷ್ಟಪಡಿಸಿದರು.

ಭಟ್ಕಳದ ಡಿವೈಎಸ್ಪಿ ಕಚೇರಿಯಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅತಿಹೆಚ್ಚು ಪ್ರಕರಣ ದಾಖಲಾದ 10 ಜನರನ್ನು ಕರೆಸಿ ವಿಚಾರಿಸಿ, ಅವರ ಪೂರ್ವಪರ ತಿಳಿದುಕೊಳ್ಳಬೇಕು ಎಂದು ಮೇಲಧಿಕಾರಿಗಳಿಂದ ಆದೇಶ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲೆಯ 10 ಜನರನ್ನು ಶಿರಸಿಗೆ ಕರೆಸಿ ವಿಚಾರಿಸಿ, ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದೆವು. ಇದರಲ್ಲಿ ಭಟ್ಕಳದ ಶ್ರೀನಿವಾಸ ಕೂಡ ಇದ್ದರು ಎಂದರು.

ಜಿಲ್ಲೆಯಲ್ಲಿ 996 ರೌಡಿಶೀಟರ್‌ಗಳಿದ್ದಾರೆ. ಈ ವರ್ಷ 167 ಜನರನ್ನು ರೌಡಿಶೀಟರ್‌ಗಳಿಂದ ಕೈಬಿಟ್ಟಿದ್ದೇವೆ. ಕ್ರಿಮಿನಲ್ ಪ್ರಕರಣದಲ್ಲಿ ಯಾರೇ ಭಾಗಿಯಾದರೂ ಅಂತಹವರ ಮೇಲೆ ಕ್ರಮ ಆಗಲಿದೆ. ಭಟ್ಕಳದಲ್ಲಿ ಮಂಗಳವಾರ ರಾತ್ರಿ ಹೆದ್ದಾರಿ ತಡೆಗೆ ಮುಂದಾದವರ ವಿರುದ್ಧ ಮತ್ತು ಸುಳ್ಳು ವದಂತಿ ಹಬ್ಬಿಸಿದವರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಇದ್ದರು.

Share this article