ಮಹಿಳೆ- ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Dec 11, 2025, 01:45 AM IST
10ಕೆಎಂಎನ್ ಡಿ15 | Kannada Prabha

ಸಾರಾಂಶ

ಗ್ರಾಪಂ ಮಟ್ಟದ ಸಂಜೀವಿನಿ ಒಕ್ಕೂಟಕ್ಕೆ ಒಂದು ಕೋಟಿ ಹಣ ಬಿಡುಗಡೆ ಮಾಡಬೇಕು ಹಾಗೂ ಗುಂಪುಗಳಿಗೆ ಕಚ್ಚಾ ವಸ್ತುಗಳನ್ನು ವಿತರಿಸಿ ತರಬೇತಿ ನೀಡಿ ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ವ್ಯವಸ್ಥೆ ಒದಗಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಪಂಗೆ ಒಂದು ಶೆಡ್ ನಿರ್ಮಾಣ ಮಾಡಿ ಒಕ್ಕೂಟದ ಚಟುವಟಿಕೆ ಆರಂಭಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ ಖಂಡಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸೇರಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿ, ನ್ಯಾಯಮೂರ್ತಿ ವರ್ಮಾ ಆಯೋಗದ ಎಲ್ಲಾ ಶಿಫಾರಸ್ಸು ಹಾಗೂ ರಾಜ್ಯದ ಉಗ್ರಪ್ಪ ಸಮಿತಿ ಶಿಫಾರಸ್ಸು ಜಾರಿ ಮಾಡಬೇಕು. ಮಹಿಳಾ ಪರ ಕಾನೂನುಗಳು ಸಮರ್ಪಕವಾಗಿ ಜಾರಿಯಾಗಬೇಕು ಎಂದು ಒತ್ತಾಯಿಸಿದರು.

ಮಹಿಳೆಯರು, ಮಕ್ಕಳ ಮೇಲೆ ವಿಕಾರ ಸ್ವರೂಪದ ಅತ್ಯಾಚಾರ, ಕೊಲೆ, ಲೈಂಗಿಕ ಕಿರುಕುಳ, ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ ಬಾಲ್ಯ ವಿವಾಹ, ಕೆಲಸದ ಸ್ಥಳಗಳಲ್ಲಿ ನಡೆಯುವ ಕಿರುಕುಳ ಹೆಣ್ಣು ಭ್ರೂಣ ಹತ್ಯೆ, ಕೂಲಿ ತಾರತಮ್ಯ, ಲಿಂಗ ತಾರತಮ್ಯ, ಜಾತಿ, ಧರ್ಮ, ಜನಾಂಗೀಯ ಹೆಸರಿನಲ್ಲಿ ದಬ್ಬಾಳಿಕೆಗಳು, ಶಿಕ್ಷಣ ಮತ್ತು ಉದ್ಯೋಗ ನಿರಾಕರಣೆ ಮುಂತಾದ ಸಾಮಾಜಿಕ ಹಾಗೂ ಸಾಂಸ್ಕೃತಿಕ ದಬ್ಬಾಳಿಕೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಧರ್ಮಸ್ಥಳದ ಅತ್ಯಾಚಾರ, ಕೊಲೆ, ಅಸಹಜ ಸಾವು, ಭೂಕಬಳಿಕೆ, ಸ್ವ-ಸಹಾಯ ಸಂಘಗಳ ಮೇಲಿನ ದೌರ್ಜನ್ಯ ಸೇರಿದಂತೆ ಎಸ್‌ಐಟಿ ಮೂಲಕ ಸಮಗ್ರ ತನಿಖೆಗೆ ಒಳಪಡಿಸಬೇಕು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಇತರೆ ಎಂಎಫ್‌ಐ ಸಂಸ್ಥೆಗಳ ಮೇಲೆ ನೂರಾರು ದೂರು ದಾಖಲಾಗಿದ್ದು, ಅವುಗಳ ಮೇಲೆ ಶೀಘ್ರ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಸ್ವ-ಸಹಾಯ ಗುಂಪುಗಳಿಗೆ ಶೇ.4ರ ಬಡ್ಡಿ ದರದಲ್ಲಿ ಬ್ಯಾಂಕ್ ಸಾಲ ನೀಡಬೇಕು ಹಾಗೂ ಬಡ ಕೂಲಿಕಾರ, ರೈತ ಮಹಿಳೆಯರಿಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಜಾಮೀನು ರಹಿತವಾಗಿ ಕನಿಷ್ಠ ಎರಡು ಲಕ್ಷ ಸಾಲ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಗ್ರಾಪಂ ಮಟ್ಟದ ಸಂಜೀವಿನಿ ಒಕ್ಕೂಟಕ್ಕೆ ಒಂದು ಕೋಟಿ ಹಣ ಬಿಡುಗಡೆ ಮಾಡಬೇಕು ಹಾಗೂ ಗುಂಪುಗಳಿಗೆ ಕಚ್ಚಾ ವಸ್ತುಗಳನ್ನು ವಿತರಿಸಿ ತರಬೇತಿ ನೀಡಿ ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ವ್ಯವಸ್ಥೆ ಒದಗಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಪಂಗೆ ಒಂದು ಶೆಡ್ ನಿರ್ಮಾಣ ಮಾಡಿ ಒಕ್ಕೂಟದ ಚಟುವಟಿಕೆ ಆರಂಭಿಸಬೇಕು. ನಿವೇಶನ ರಹಿತರಿಗೆ ನಿವೇಶನ ನೀಡಿ ವಸತಿ ನಿರ್ಮಿಸಿಕೊಳ್ಳಲು ಕನಿಷ್ಠ 5 ಲಕ್ಷ ರು. ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಯನ್ನು ಸರ್ಕಾರವೇ ಮಾಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ಪುನರ್ ಸ್ಥಾಪಿಸಬೇಕು. ಬಡ ರೋಗಿಗಳಿಗೆ ಗುಣಮಟ್ಟದ ಔಷಧಿಯನ್ನು ರಿಯಾಯ್ತಿ ದರದಲ್ಲಿ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಡಿ.ಕೆ.ಲತಾ, ಸುಶೀಲ, ಕಲಾವತಿ ವಿ, ಶೋಭ, ಪ್ರೇಮ, ಜಯಲಕ್ಷ್ಮಮ್ಮ, ಎಂ.ಕೆ.ಪ್ರಭಾವತಿ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಲಿತರ ಜೊತೆಗೆ ಚರ್ಚಿಸಿ ದೂರು ಪಡೆದು ಕಾನೂನು ಚೌಕಟ್ಟಿನಲ್ಲಿ ಕ್ರಮ: ಅನಿಲ್ ಕುಮಾರ್
ರೈಲುಗಳಲ್ಲಿ ಹೆಚ್ಚಾಗುತ್ತಲೇ ಇದೆ ಗಾಂಜಾ ಸಾಗಣೆ