ಎಸ್ಐಆರ್ ವಿರೋಧಿ ಹೋರಾಟಗಾರರ ಬಂಧನ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Oct 13, 2026, 02:15 AM IST
ಎಸ್‌ಐಆರ್ ವಿರೋಧಿಸಿ ಕೊಪ್ಪಳದಲ್ಲಿ ಪ್ರತಿಭಟನೆ ನಡೆಯಿತು. | Kannada Prabha

ಸಾರಾಂಶ

ಎಸ್ಐಆರ್ ಪ್ರಕ್ರಿಯೆ ರದ್ದುಗೊಳಿಸುವಂತೆ ಆಗ್ರಹಿಸಿ ನಡೆದ ಹೋರಾಟದ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಬಂಧಿಸಿರುವುದು ಹಾಗೂ ಪೊಲೀಸರ ದೌರ್ಜನ್ಯವನ್ನು ಖಂಡಿಸಿ ಎಸ್‌ಎಫ್‌ಐ, ಡಿವೈಎಫ್‌ಐ, ಎಐಡಿವೈಒ, ಎಐಡಿಎಸ್‌ಒ ಹಾಗೂ ಕೆವಿಎಸ್ ಸಂಘಟನೆಗಳ ಕಾರ್ಯಕರ್ತರು ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಕೊಪ್ಪಳ: ಎಸ್ಐಆರ್ ಪ್ರಕ್ರಿಯೆ ರದ್ದುಗೊಳಿಸುವಂತೆ ಆಗ್ರಹಿಸಿ ನಡೆದ ಹೋರಾಟದ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಬಂಧಿಸಿರುವುದು ಹಾಗೂ ಪೊಲೀಸರ ದೌರ್ಜನ್ಯವನ್ನು ಖಂಡಿಸಿ ಎಸ್‌ಎಫ್‌ಐ, ಡಿವೈಎಫ್‌ಐ, ಎಐಡಿವೈಒ, ಎಐಡಿಎಸ್‌ಒ ಹಾಗೂ ಕೆವಿಎಸ್ ಸಂಘಟನೆಗಳ ಕಾರ್ಯಕರ್ತರು ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಅ. 10ರಂದು ದೇಶವ್ಯಾಪಿ ನಡೆದ ಹೋರಾಟದ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಬಂಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದ ಪ್ರತಿಭಟನಾಕಾರರು, ಎಸ್ಐಆರ್ ಪ್ರಕ್ರಿಯೆ ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್ ಮಾತನಾಡಿ, ದೆಹಲಿಯಲ್ಲಿ ಎಸ್ಐಆರ್ ರದ್ದತಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದ 7,000ಕ್ಕೂ ಹೆಚ್ಚು ಪ್ರತಿಭಟನಾಕಾರರು, ವಿದ್ಯಾರ್ಥಿ-ಯುವಜನರು ಹಾಗೂ ಪ್ರಗತಿಪರ ಸಂಘಟನೆಗಳ ನಾಯಕರನ್ನು ಬಂಧಿಸಿರುವುದು ನ್ಯಾಯಯುತ ಹೋರಾಟ ಹತ್ತಿಕ್ಕುವ ಕ್ರಮವಾಗಿದೆ. ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾದ ಪ್ರತಿಭಟನೆಯ ಹಕ್ಕನ್ನು ದಮನಕಾರಿ ನೀತಿಗಳ ಮೂಲಕ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹೇಳಿದರು.

ಎಸ್ಐಆರ್ ಪ್ರಕ್ರಿಯೆಯಿಂದ 13 ಕೋಟಿಗೂ ಹೆಚ್ಚು ಮತದಾರರ ಮತದಾನದ ಹಕ್ಕಿಗೆ ಧಕ್ಕೆಯಾಗುವ ಆತಂಕವಿದೆ. ಬಡವರು, ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು ಹಾಗೂ ಆದಿವಾಸಿಗಳು ಮತದಾನದ ಹಕ್ಕು ಕಳೆದುಕೊಳ್ಳುವ ಅಪಾಯವಿದೆ. ಆದ್ದರಿಂದ ಸರ್ಕಾರ ಕೂಡಲೇ ಈ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಇಬ್ಬರು ಚುನಾವಣಾ ಆಯುಕ್ತರ ಅಭಿಪ್ರಾಯಗಳನ್ನು ಕಡೆಗಣಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಏಕಪಕ್ಷೀಯವಾಗಿ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶಾದ್ಯಂತ ವಿದ್ಯಾರ್ಥಿ-ಯುವಜನರು ಹಾಗೂ ಜನಸಾಮಾನ್ಯರು ಹೋರಾಟ ನಡೆಸುತ್ತಿದ್ದು, ಬಂಧನಗಳ ಮೂಲಕ ಜನರ ಆಕ್ರೋಶವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದರು.

ಎಐಡಿಎಸ್‌ಒ ಸಂಘಟನೆಯ ಸಿಂಧೂ ಕೌದಿ ಮಾತನಾಡಿ, ರಾಜ್ಯದಲ್ಲಿಯೂ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯನ್ನು ಪೊಲೀಸ್ ಬಲದ ಮೂಲಕ ಹತ್ತಿಕ್ಕಲಾಗಿದೆ ಎಂದು ಆರೋಪಿಸಿ, ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿದರು. ವಿದ್ಯಾರ್ಥಿ-ಯುವಜನರ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದ್ದು, ಸರ್ಕಾರ ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಕೆವಿಎಸ್‌ನ ದುರ್ಗೇಶ ಮಾತನಾಡಿ, ವಿದ್ಯಾರ್ಥಿ-ಯುವಜನರ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ. ಎಸ್ಐಆರ್ ರದ್ದತಿ ಹಾಗೂ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಜನರು ಬೀದಿಗಿಳಿದಿದ್ದಾರೆ. ಬೇಡಿಕೆಗಳು ಈಡೇರುವ ವರೆಗೆ ಹೋರಾಟ ತೀವ್ರಗೊಳಿಸಲು ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರು ಒಗ್ಗೂಡಬೇಕು ಎಂದು ಕರೆ ನೀಡಿದರು.

ಪ್ರತಿಭಟನೆಯಲ್ಲಿ ಸಂಜೀವ್ ಮೂರ್ತಿ ಗುಡದಳ್ಳಿ, ಅನಿಲ್ ಕೊಪ್ಪಳ, ಶಿವಮೂರ್ತಿ ವದಗನಾಳ್, ಗವಿ ಕುಣಿಕೇರಿ, ಯಮನೂರ, ಯಮುನಾ ಚೆಳ್ಳೂರು, ಸಂಜಿತ ರಾಯಚೂರು, ವೀರೇಶ್ ಗೊರೆಬಾಳ, ಶ್ರೀನಿವಾಸ್ ಹೊಸಳ್ಳಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೈಗಾರಿಕಾ ವಸಾಹತು ಸ್ಥಾಪನೆಯಿಂದ ನಿರುದ್ಯೋಗ ಸಮಸ್ಯೆ ನಿವಾರಣೆ
ಪೌಷ್ಟಿಕ ಆಹಾರವೇ ಮನುಷ್ಯನ ಆರೋಗ್ಯಕ್ಕೆ ಮನೆ ಮದ್ದು; ಲಲಿತಾ