ಭೀಕರ ಹತ್ಯೆ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Aug 22, 2026, 04:15 AM IST
ಬೆಳಗಾವಿ  | Kannada Prabha

ಸಾರಾಂಶ

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕುಪವಾಡದಲ್ಲಿ ಖಾನಾಪುರ ತಾಲೂಕಿನ ಹೆಬ್ಬಾಳ ಗ್ರಾಮದ ದಂಪತಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಖಂಡಿಸಿ ಮರಾಠಾ ಸಮಾಜ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕುಪವಾಡದಲ್ಲಿ ಖಾನಾಪುರ ತಾಲೂಕಿನ ಹೆಬ್ಬಾಳ ಗ್ರಾಮದ ದಂಪತಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಖಂಡಿಸಿ ಮರಾಠಾ ಸಮಾಜ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ನಗರದ ಛತ್ರಪತಿ ಧರ್ಮವೀರ ಸಂಭಾಜಿ ಮಹಾರಾಜ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ದಂಪತಿಯ ಹತ್ಯೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿದರು. ಆರೋಪಿಗೆ ಫಾಸ್ಟ್‌ಟ್ರ್ಯಾಕ್ ನ್ಯಾಯಾಲಯದ ಮೂಲಕ ವಿಚಾರಣೆ ನಡೆಸಿ ಗಲ್ಲು ಶಿಕ್ಷೆ ವಿಧಿಸಬೇಕು. ಹತ್ಯೆಗೀಡಾದ ದಂಪತಿಯ ಇಬ್ಬರು ಮಕ್ಕಳ ಭವಿಷ್ಯದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಂಡು ಸೂಕ್ತ ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿದರು. ಮಹಾರಾಷ್ಟ್ರ ಏಕೀಕರಣ ಸಮಿತಿ ಅಧ್ಯಕ್ಷ ಮಾಲೋಜಿ ಅಷ್ಟೇಕರ್ ಮಾತನಾಡಿ, ಹೆಬ್ಬಾಳ ಗ್ರಾಮದ ದಂಪತಿಯನ್ನು ಮಹಾರಾಷ್ಟ್ರದಲ್ಲಿ ಭೀಕರವಾಗಿ ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯ. ಇನ್ನೊಬ್ಬರ ಜೀವ ಕಸಿಯುವ ಹಕ್ಕು ಯಾರಿಗೂ ಇಲ್ಲ. ಕೃತ್ಯ ಎಸಗಿದ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಹಾಗೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.ಎಂಇಎಸ್‌ ಮುಖಂಡ ಮುರಳೀಧರ ಪಾಟೀಲ ಮಾತನಾಡಿ, ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ನಡೆಸಿದ ದಾಳಿಯಲ್ಲಿ ಇಬ್ಬರು ಜೀವ ಕಳೆದುಕೊಂಡಿರುವುದು ದುರಂತ. ಖಾನಾಪುರ ಭಾಗದ ಜನರು ಉದ್ಯೋಗಕ್ಕಾಗಿ ದೇಶದ ವಿವಿಧೆಡೆ ತೆರಳಿ ಉತ್ತಮ ಹೆಸರು ಗಳಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಅಮಾಯಕ ದಂಪತಿ ಹತ್ಯೆಯಾಗಿರುವುದು ನೋವು ತಂದಿದೆ. ಇಬ್ಬರು ಮಕ್ಕಳು ಅನಾಥರಾಗಿದ್ದು, ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಜವಾಬ್ದಾರಿ ವಹಿಸಿಕೊಂಡು ಕುಟುಂಬಕ್ಕೆ ತಕ್ಷಣ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.ಶ್ರೀರಾಮ ಸೇನಾ ಹಿಂದುಸ್ಥಾನ್ ಸಂಸ್ಥಾಪಕ ಅಧ್ಯಕ್ಷ ರಮಾಕಾಂತ್ ಕೊಂಡೂಸ್ಕರ್ ಮಾತನಾಡಿ, ಸಾಂಗ್ಲಿಯ ಕುಪವಾಡದಲ್ಲಿ ಉಪಜೀವನಕ್ಕಾಗಿ ನೆಲೆಸಿದ್ದ ಖಾನಾಪುರ ತಾಲೂಕಿನ ಕುಟುಂಬದ ಮೇಲೆ ನಡೆದ ದಾಳಿ ಅತ್ಯಂತ ಕ್ರೂರವಾಗಿದೆ. ಮಹಿಳೆಯನ್ನು ಹತ್ಯೆ ಮಾಡಿ, ಆಕೆಯ ಪತಿಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಆರೋಪಿಗೆ ಯಾವುದೇ ಕಾರಣಕ್ಕೂ ಸಡಿಲಿಕೆ ನೀಡಬಾರದು. ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.ಮರಾಠಾ ಸಮಾಜದ ಮುಖಂಡ ಅಜಿತ್ ಜಾದವ್ ಹಾಗೂ ಸುನೀತಾ ಮಾತನಾಡಿ, ಕೇಸರಕರ್ ಕುಟುಂಬದ ದಂಪತಿ ಹತ್ಯೆಯಿಂದ ಇಬ್ಬರು ಹೆಣ್ಣು ಮಕ್ಕಳು ಅನಾಥರಾಗಿದ್ದಾರೆ. ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದು, ಮಕ್ಕಳ ಶಿಕ್ಷಣ ಹಾಗೂ ಭವಿಷ್ಯದ ಸಂಪೂರ್ಣ ಜವಾಬ್ದಾರಿಯನ್ನು ಮಹಾರಾಷ್ಟ್ರ ಸರ್ಕಾರ ವಹಿಸಿಕೊಳ್ಳಬೇಕು. ದಂಪತಿಯ ಸಾವಿಗೆ ಕಾರಣನಾದ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಮರಾಠಾ ಸಮಾಜದ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇವಸ್ಥಾನ ನಿರ್ಮಾಣದ 2ನೇ ಹಂತದ ಕಾಮಗಾರಿಗೆ ಲಕ್ಷ್ಮೀ ಚೆಕ್ ಹಸ್ತಾಂತರ
ನಾಡಿದ್ದು ಕರಡು ಮತದಾರರ ಪಟ್ಟಿ ಪ್ರಕಟ