ಕನ್ನಡಪ್ರಭ ವಾರ್ತೆ ಬಳ್ಳಾರಿ
ರಾಜ್ಯ ಸರ್ಕಾರ ನೀಡಿದ ಭರವಸೆಯಂತೆ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹10 ಸಾವಿರ ಗೌರವಧನ ನೀಡಬೇಕು ಎಂದು ಒತ್ತಾಯಿಸಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಮಾತನಾಡಿ, ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ಕಳೆದ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಅನಿರ್ದಿಷ್ಟಾವಧಿ ಮುಷ್ಕರದ ವೇಳೆ ಸಂಘಟನೆಯ ಮುಖಂಡರ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ₹10 ಸಾವಿರ ಗೌರವಧನ ನೀಡಲಾಗುವುದು. ಏಪ್ರಿಲ್ ತಿಂಗಳಿನಿಂದಲೇ ಜಾರಿಗೊಳಿಸಲಾಗುವುದು ಎಂದು ಘೋಷಿಸಿದ್ದರು. ಈ ಸಭೆಯಲ್ಲಿ ಆರೋಗ್ಯ ಸಚಿವರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದಾದ ನಂತರ ಸಿಎಂ ಹಾಗೂ ಸಚಿವರು, ಮಾಧ್ಯಮಗಳ ಮುಂದೆ ಅಧಿಕೃತವಾಗಿ ಘೋಷಿಸಿದ್ದರು. ಆದರೆ ಇಲ್ಲಿಯವರೆಗೆ ಸರ್ಕಾರ ಈ ಕುರಿತ ಆದೇಶವನ್ನೇ ಮಾಡಿಲ್ಲ. ಮುಖ್ಯಮಂತ್ರಿಗಳು ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ ಎಂದು ದೂರಿದರು.
ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆಯೇ ಎಲ್ಲಾ ಆಶಾಗಳಿಗೆ ₹10 ಸಾವಿರ ಗೌರವಧನವನ್ನು ಖಾತ್ರಿಗೊಳಿಸಬೇಕು. ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಿದಂತೆ, ಈ ಬಾರಿಯ ಬಜೆಟ್ ನಲ್ಲಿ ಹಣ ಮೀಸಲಿರಿಸಿ, ಗೌರವಧನ ಹೆಚ್ಚಳದ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು. ಸಮೀಕ್ಷೆ ಮತ್ತಿತರ ಕಾರ್ಯಗಳಿಗಾಗಿ ಆಶಾಗಳನ್ನು ಮನೆಗೆ ಕಳುಹಿಸುವ ಆದೇಶ ಹಿಂಪಡೆಯಬೇಕು ಹಾಗೂ ಆಶಾಗಳ ಅವೈಜ್ಙಾನಿಕ ಮೌಲ್ಯಮಾಪನ ಪ್ರಕ್ರಿಯೆ ಹಿಂದಕ್ಕೆ ಪಡೆಯಬೇಕು ಎಂದು ನಾಗಲಕ್ಷ್ಮಿ ಒತ್ತಾಯಿಸಿದರು.ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ. ಪ್ರಮೋದ್ ಮಾತನಾಡಿ, ಆಶಾಗಳಿಗೆ ಜನಸಂಖ್ಯೆಯನ್ನು ತರ್ಕಬದ್ಧಗೊಳಿಸುವ ಹೆಸರಲ್ಲಿ ಒಂದಿಷ್ಟು ಸಂಖ್ಯೆಯ ಆಶಾಗಳನ್ನು ಮನೆ ಕಳುಹಿಸುವ ಪ್ರಯತ್ನ ನಡೆಯುತ್ತಿದೆ. ಕಳೆದ 10-15 ವರ್ಷಗಳಿಂದ ಹಗಲು ರಾತ್ರಿ ಗರ್ಭಿಣಿಯರ ಹಾಗೂ ಶಿಶುಗಳು ಆರೋಗ್ಯಕ್ಕಾಗಿ, ಸಮಾಜದ ಆರೋಗ್ಯಕ್ಕಾಗಿ ಕಷ್ಟಪಡುತ್ತಿರುವ ಆಶಾಗಳನ್ನು ಸರ್ಕಾರ ಅಗೌರವದಿಂದ ಕಾಣುತ್ತಿದೆ. ಕೋವಿಡ್ ಸಂದರ್ಭ ತಮ್ಮ ಜೀವವನ್ನು ಪಣಕ್ಕಿಟ್ಟು ದುಡಿದ ಆಶಾಗಳನ್ನ ಯಾವುದೇ ಮುಲಾಜಿಲ್ಲದೆ ಸರ್ಕಾರ ಮನೆಗೆ ಕಳುಹಿಸಲು ಹೊರಟಿದೆ. ಸರ್ಕಾರದ ಹಾಗೂ ಆರೋಗ್ಯ ಇಲಾಖೆ ಇಂತಹ ಕ್ರಮಗಳ ವಿರುದ್ಧ ಆಶಾಗಳು ಬೃಹತ್ ಸಂಖ್ಯೆಯ ಧ್ವನಿ ಎತ್ತಬೇಕು. ಮುಂದಿನ ದಿನಗಳಲ್ಲಿ ಮತ್ತೆ ಉಗ್ರ ಹೋರಾಟಕ್ಕೆ ತಯಾರಾಗಬೇಕು ಎಂದರು.
ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷೆ ಶಾಂತಾ, ಅಧ್ಯಕ್ಷೆ ಗೀತಾ ಮಾತನಾಡಿದರು. ತಾಲೂಕು ಮುಖಂಡರಾದ ರೇಷ್ಮಾ, ರಾಮಕ್ಕ, ಸಹನಾ, ಈರಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿ, ರಾಜ್ಯ ಸರ್ಕಾರದ ಧೋರಣೆ ಖಂಡಿಸಿದರು.ಇಲ್ಲಿನ ಡಾ. ರಾಜ್ ಕುಮಾರ್ ಉದ್ಯಾನವನದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ನಗರದ ಪ್ರಮುಖ ಬೀದಿಗಳ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ, ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಜಿಲ್ಲಾಡಳಿತ ಮೂಲಕ ಸಲ್ಲಿಸಿದರು.