ರೈತರ ಪಂಪ್‌ಸೆಟ್‌ಗಳಿಗೆ 7 ಗಂಟೆ ವಿದ್ಯುತ್‌ ಪೂರೈಸಲು ಒತ್ತಾಯಿಸಿ ಪ್ರತಿಭಟನೆ

KannadaprabhaNewsNetwork |  
Published : Feb 25, 2025, 12:46 AM IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಹುಬ್ಬಳ್ಳಿಯ ಹೆಸ್ಕಾಂ ಕಚೇರಿಯ ಎದುರು ರೈತರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. | Kannada Prabha

ಸಾರಾಂಶ

ನವನಗರದ ಹೆಸ್ಕಾಂ ಕಚೇರಿಗೆ ವಿಜಯಪುರ, ಬಾಗಲಕೋಟೆ, ರಾಮದುರ್ಗ, ಬೆಳಗಾವಿ, ಅಥಣಿ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ನೂರಾರು ರೈತರು ಹೆಸ್ಕಾಂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿ: ರೈತರ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ 7 ಗಂಟೆ ವಿದ್ಯುತ್ ಹಾಗೂ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲು ಸಂಜೆ 6 ರಿಂದ ಬೆಳಗ್ಗೆ 6ರ ವರೆಗೆ ವಿದ್ಯುತ್ ಪೂರೈಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಇಲ್ಲಿಯ ನವನಗರದ ಹೆಸ್ಕಾಂ ಕಚೇರಿ ಆವರಣದಲ್ಲಿ ಸೋಮವಾರ ಗಂಟೆಗೂ ಹೆಚ್ಚುಕಾಲ ಹುಬ್ಬಳ್ಳಿ-ಧಾರವಾಡ ರಸ್ತೆ ಬಂದ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿಯ ನವನಗರದ ಹೆಸ್ಕಾಂ ಕಚೇರಿಗೆ ವಿಜಯಪುರ, ಬಾಗಲಕೋಟೆ, ರಾಮದುರ್ಗ, ಬೆಳಗಾವಿ, ಅಥಣಿ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ನೂರಾರು ರೈತರು ಹೆಸ್ಕಾಂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸೇನೆಯ ಅಧ್ಯಕ್ಷ ಚುನಪ್ಪ ಪೂಜೇರಿ ಮಾತನಾಡಿ, ರಂಗರಾಜ್ ವರದಿಯನ್ವಯ ರೈತರ ಬೆಳೆಗೆ ವೈಜ್ಞಾನಿಕ ದರ ನಿಗದಿಪಡಿಸಬೇಕು. ಅಥಣಿ ತಾಲೂಕಿನ ವಿದ್ಯುತ್ ಬಾಕಿ ₹30 ಕೋಟಿ ಮನ್ನಾ ಮಾಡಬೇಕು. ಅಕ್ರಮ-ಸಕ್ರಮ ಮತ್ತು ಸಕ್ರಮಕ್ಕೆ ಶೀಘ್ರವೇ ಸಂಪರ್ಕ ಮುಂದುವರಿಸಬೇಕು. ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕು. ದುಡಿತಕ್ಕೆ ತಕ್ಕ ಪ್ರತಿಫಲ ನೀಡಬೇಕೆಂಬುದೇ ನಮ್ಮ ಹಕ್ಕು. ನಾವೇನು ಕೈಗಾರಿಕೆಗೆ ವಿದ್ಯುತ್ ಬಳಸುತ್ತಿಲ್ಲ. ರೈತರ ಮನೆಗಳಿಗೆ ವಿದ್ಯುತ್ ಕೊಡಲ್ಲ ಎಂದಾದರೆ, ಸಚಿವರು ಮತ್ತು ಶಾಸಕರ ಮನೆಗೂ ವಿದ್ಯುತ್ ಕಡಿತ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು. ಆದರೆ, ಹೆಸ್ಕಾಂನವರು ಲೋಡ್‌ಶೆಡ್ಡಿಂಗ್ ನೆಪದಲ್ಲಿ ಪದೆ ಪದೇ ವಿದ್ಯುತ್ ಕಡಿತಗೊಳಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಓದಿನ ಜತೆಗೆ ಕೃಷಿ ಚಟುವಟಿಕೆಗೆ ತೀವ್ರ ತೊಂದರೆಯಾಗುತ್ತಿದೆ. ಈ ಬಗ್ಗೆ ಸಾಕಷ್ಟು ದೂರು ನೀಡಿ ಎಚ್ಚರಿಕೆ ನೀಡಿದರೂ, ಸರಿಪಡಿಸುವ ಕೆಲಸ ಮಾಡುತ್ತಿಲ್ಲ ಎಂದು ತೀವ್ರ ಅಸಮಧಾನ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಅಧ್ಯಕ್ಷ ಅಜೀಮ್‌ಪೀರ್ ಖಾದ್ರಿ ಮಾತನಾಡಿ, ಹೆಸ್ಕಾಂ ವ್ಯಾಪ್ತಿಯ 7 ಜಿಲ್ಲೆಗಳ ಸಚಿವರು ಸೇರಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿಮ್ಮ ಸಮಸ್ಯೆ, ಬೇಡಿಕೆ ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಹೇಳುತ್ತಿದ್ದಂತೆ ಆಕ್ರೋಶಗೊಂಡ ಪ್ರತಿಭಟನಾ ನಿರತರು ಅಧ್ಯಕ್ಷರೊಂದಿಗೆ ವಾಗ್ವಾದ ನಡೆಸಿದರು. ಸಚಿವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಲಿಖಿತ ಉತ್ತರ ಕೊಡುವಂತೆ ಆಗ್ರಹಿಸಿ ಗಂಟೆಗೂ ಹೆಚ್ಚುಕಾಲ ಹುಬ್ಬಳ್ಳಿ-ಧಾರವಾಡ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು.

ಹೆಸ್ಕಾಂ ಎಂಡಿ ಎಂ. ವೈಶಾಲಿ, ಪಡಸಲಗಿಯ ಶಶಿಕಾಂತ ಗುರೂಜಿ, ಸುಭಾಷಗೌಡ, ಮೈಸೂರಿನ ಫಯಾಜ್, ಗದಗಿನ ವಿಜಯಕುಮಾರ, ರಾಯಚೂರಿನ ಶರಣಪ್ಪ ಅರಳಿ, ರಾಜು ಪವಾರ, ಕಿಶನ್ ನಂದಿ, ರಾಜಕುಮಾರ ಜಂಬಗಿ, ಚಿಕ್ಕೋಡಿಯ ಮಲ್ಲಪ್ಪಣ್ಣ ಅಂಗಡಿ, ಪ್ರಕಾಶ ನಾಯಕ, ಬೆಳಗಾವಿಯ ಆಶಾ ಎಂ, ವಾಸು ಪಂಡ್ರೊಳ್ಳಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌