ಕನ್ನಡಪ್ರಭ ವಾರ್ತೆ ತುಮಕೂರು ಚಾಮರಾಜಪೇಟೆಯ ಶಾಸಕ ಜಮೀರ್ ಅಹಮದ್ ಖಾನ್ ಅವರಿಗೆ ಮುಂದಿನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ, ಅಲ್ಪಸಂಖ್ಯಾತರು ಹಾಗೂ ವಿವಿಧ ಸಮುದಾಯಗಳ ಮುಖಂಡರು ನಗರದ ಟೌನ್‌ಹಾಲ್ ವೃತ್ತ ಪ್ರತಿಭಟನೆ ನಡೆಸಿದರು.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ಅತೀಕ್ ಅಹಮದ್ ನೇತೃತ್ವದಲ್ಲಿ ನೂರಾರು ಅಲ್ಪಸಂಖ್ಯಾತ, ದಲಿತ, ಹಿಂದುಳಿದ ವರ್ಗಗಳ ಮುಖಂಡರು ಪ್ರತಿಭಟನೆ ನಡೆಸಿ, ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ಎಲ್ಲಾ ವರ್ಗದ ಜನರ ಪ್ರೀತಿಗಳಿಸಿರುವ, ಸದಾ ಜನರ ಒಳಿತಿಗಾಗಿ ದುಡಿಯುತ್ತಿರುವ ಜಮೀರ್ ಅಹಮದ್‌ಖಾನ್ ಅವರನ್ನು ಸಚಿವರನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು.ಜಿಲ್ಲಾ ಕಾಂಗ್ರೆಸ್‌ನ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ಅತೀಕ್ ಅಹಮದ್ ಮಾತನಾಡಿ, ಜಮೀರ್ ಅಹಮದ್ ಖಾನ್ ಅವರು ಕೇವಲ ಮುಸ್ಲಿಂರಿಗೆ ಅಲ್ಲ, ಎಲ್ಲಾ ಜನಾಂಗದ ಪ್ರೀತಿ ಗಳಿಸಿದ್ದಾರೆ. ಕಷ್ಟ ಎಂದು ಬಂದವರನ್ನು ಬರಿಗೈಯಲ್ಲಿ ಕಳುಹಿಸಿದ ಉದಾಹರಣೆಯೇ ಇಲ್ಲ. ಪಕ್ಷ ಮತ್ತು ಸರ್ಕಾರ ನೀಡಿದ ಎಲ್ಲಾ ಜವಾಬ್ದಾರಿಗಳನ್ನು ಅಚ್ಚು ಕಟ್ಟಾಗಿ ನಿಭಾಯಿಸಿ, ಒಳ್ಳೆಯ ಹೆಸರು ಬರುವಂತೆ ಮಾಡಿದ್ದಾರೆ. ಈ ಹಿಂದೆ 2024ರ ಲೋಕಸಭಾ ಚುನಾವಣೆಯಲ್ಲಿ ಅಂದಿನ ದಾವಣೆಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು, ಬಹಿರಂಗವಾಗಿಯೇ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದರು. ಅದನ್ನು ಸ್ವತಃ ಮಾಧ್ಯಮಗಳ ಮುಂದೆ ಒಪ್ಪಿಕೊಂಡರು. ಆದರೆ ಅವರ ವಿರುದ್ದ ಯಾವುದೇ ಕ್ರಮ ಕೈಗೊಳ್ಳದ ಹೈಕಮಾಂಡ್, ಉಪಚುನಾವಣೆ ಸಂದರ್ಭದ್ದು ಎನ್ನಲಾದ ಫೇಕ್ ಆಡಿಯೋ ಒಂದನ್ನು ಮುಂದಿಟ್ಟುಕೊಂಡು ಜಮೀರ್ ಅಹಮದ್ ಖಾನ್ ಅವರನ್ನು ಅಧಿಕಾರದಿಂದ ದೂರ ಇಡುವುದು ಕಾಂಗ್ರೆಸ್‌ನ ಇಬ್ಬಗೆಯ ನೀತಿಯನ್ನುತೋರಿಸುತ್ತದೆ ಎಂದು ನುಡಿದರು.