ಮುಂಡರಗಿ: ಚಳಿಗಾಲದ ಅಧಿವೇಶನದ ವೇಳೆ ಗೃಹ ಸಚಿವ ಅಮಿತ್ ಶಾ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದು, ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ಕೈ ಬಿಡುವುದರ ಜತೆಗೆ ಗಡಿಪಾರು ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಅಭಿಮಾನಿ ಬಳಗ ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ರಾಷ್ಟ್ರಪತಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಕಮೀಟಿ ಅಧ್ಯಕ್ಷ ಡಿ.ಡಿ. ಮೋರನಾಳ, ರಾಜ್ಯ ಕೆಪಿಸಿಸಿ ಕಾರ್ಯದರ್ಶಿ ಎಸ್.ಡಿ. ಮಕಾಂದಾರ, ಪುರಸಭೆ ಸದಸ್ಯ ನಾಗರಾಜ ಹೊಂಬಳಗಟ್ಟಿ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಚಂದ್ರ ಕಲಾಲ ಮಾತನಾಡಿ, ಸಂವಿಧಾನ ಬದಲಾವಣೆ ಮಾಡುವುದು ಬಿಜೆಪಿಗರ ಉದ್ದೇಶವಾಗಿದೆ. ಸಂವಿಧಾನದಲ್ಲಿ ಮನುಸ್ಮೃತಿ ಇಲ್ಲದಿರುವುದರಿಂದ ಅದನ್ನು ಬಿಜೆಪಿಗರು ಸದಾ ಖಂಡಿಸುತ್ತಿದ್ದಾರೆ. ಅವರಿಗೆ ಗಾಂಧಿ, ಅಂಬೇಡ್ಕರ್ ತತ್ವಗಳು ಬೇಕಾಗಿಲ್ಲ. ಸದಾ ಸಂವಿಧಾನಕ್ಕೆ ಅಪಚಾರವೆಸಗುತ್ತಿದ್ದಾರೆ. ಈ ಬಂದ್ ಕರೆಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲಿಸುತ್ತದೆ ಎಂದರು.
ಡಿ.ಎಸ್.ಎಸ್. ಮುಖಂಡ ಸೋಮಣ್ಣ ಹೈತಾಪೂರ ಮಾತನಾಡಿ, ಗೃಹ ಸಚಿವರಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅಂಬೇಡ್ಕರ್ ರಚಿಸಿದ ಸಂವಿಧಾನವೇ ಕಾರಣವಾಗಿದೆ. ಅಂತಹ ಮಹಾನಾಯಕನ ಬಗ್ಗೆ ಹಗುರವಾಗಿ ಮಾತನಾಡಿದ ಅಮಿತಾ ಶಾ ತಕ್ಷಣವೇ ಕ್ಷಮೆಯಾಚಿಸಬೇಕು. ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ವಿ.ಎಲ್. ನಾಡಗೌಡ್ರ, ಪೂಜಾ ಕಮ್ಮಾರ, ಹೇಮಂತಗೌಡ ಪಾಟೀಲ, ನಿಂಗರಾಜ ಹಾಲಿನವರ, ಸಂತೋಷ ಹಡಗಲಿ, ಕಿರಣ ಹಾಲಿನವರ, ಮಹೇಶ ಹಾಲಿನವರ, ಚಂದ್ರಶೇಖರ ಪೂಜಾರ, ಮಲ್ಲೇಶ ಕಕ್ಕೂರ, ಸುರೇಶ ನಾಯ್ಕರ, ರಮೇಶ ಹಾಲಿನವರ, ದುರುಗಪ್ಪ ಹರಿಜನ, ಹನಮಂತ ಜಂತ್ಲಿಶಿರೂರ, ರಾಜು ಹೆಸರೂರ, ಮಂಜು ಹರಿಜನ, ಭೀಮರಾಜ್ ಮುಂಡವಾಡ, ಮೈಲಾರ ಹಾಲಿನವರ, ಅಡಿವೆಪ್ಪ ಛಲವಾದಿ, ಶಿವಾನಂದ ದೊಡ್ಡಮನಿ, ಲಕ್ಷ್ಮಣ ದೊಡ್ಡಮನಿ, ಲಕ್ಷ್ಮಣ ತಗಡಿನಮನಿ, ಬಿ.ಎಸ್. ಮೇಟಿ, ಮರಿಯಪ್ಪ ಸಿದ್ದಣ್ಣವರ, ಎಂ.ಯು. ಮಕಾಂದಾರ, ಮಹ್ಮದರಫೀಕ್ ಮುಲ್ಲಾ, ಸಂತೋಷ ಹಿರೇಮನಿ, ಎಂ.ಕೆ. ತಳಗಡಿ, ರಾಜಾಸಾಬ್ ಬೆಟಗೇರಿ, ಮಂಜುನಾಥ ಕಟ್ಟೀಮನಿ, ಅಡಿವೆಪ್ಪ ಛಲವಾದಿ, ರಾಜು ಡಾವಣಗೇರಿ, ಡಿ.ಎಂ. ಕಾತರಕಿ, ಬಸವರಾಜ ನವಲಗುಂದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸುಜಾತಾ ದೊಡ್ಡಮನಿ ಮನವಿ ಓದಿ ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಮೂಲಕ ರಾಷ್ಟ್ರಪತಿಗೆ ಸಲ್ಲಿಸಿದರು. ಬಂದ್ ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿನ ಎಲ್ಲ ಅಂಗಡಿ ಮುಂಗಟ್ಟುಗಳನ್ನು ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದರು. ಬಸ್ ಸಂಚಾರ ಹಾಗೂ ಶಾಲಾ-ಕಾಲೇಜುಗಳು ಎಂದಿನಂತೆ ನಡೆದಿದ್ದವು. ಈ ಸಂದರ್ಭದಲ್ಲಿ ಸಿಪಿಐ ಮಂಜುನಾಥ ಕುಸುಗಲ್ ತಮ್ಮ ಸಿಬ್ಬಂದಿಯೊಂದಿಗೆ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.