ಭತ್ತ ಖರೀದಿಯಲ್ಲಿ ದಳ್ಳಾಳಿಗಳ ಕಾಟ ಹೆಚ್ಚಾಗಿದ್ದರೂ ಸರ್ಕಾರ ಅವರ ಪರ ಕೆಲಸ ಮಾಡುತ್ತಿದೆ. ಸುಗ್ಗಿಯಲ್ಲಿ ಭತ್ತ ಕಟಾವು ಮಾಡಿದ ವೇಳೆ ಖರೀದಿ ಕೇಂದ್ರ ತೆರೆಯದೇ ಸುಗ್ಗಿ ಮುಗಿದ ನಂತರ ಖರೀದಿ ಕೇಂದ್ರ ತೆರೆಯುತ್ತದೆ. ರೈತರು ಜಮೀನುಗಳ ಬಳಿ ಭತ್ತ ಇಟ್ಟುಕೊಳ್ಳಲಾಗದೆ ದಳ್ಳಾಳಿಗಳ ಮೊರೆ ಹೋಗುವ ಪರಿಸ್ಥಿತಿ ಎದುರಾಗಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕ್ವಿಂಟಲ್ ಭತ್ತಕ್ಕೆ 300 ರು. ಪ್ರೋತ್ಸಾಹ ಧನದ ಜೊತೆ 4 ಸಾವಿರ ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಭತ್ತ ಬೆಳೆಗಾರ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಬೆಳಗೊಳ ಸುನೀಲ್ ನೇತೃತ್ವದ ಸಮಿತಿ ಸದಸ್ಯರು, ರೈತರು ತಾಲೂಕು ಎದುರು ಆಗಮಿಸಿ ಸರ್ಕಾರದ ವಿರುದ್ಧ ಘೋಷಣೆಗಳ ಕೂಗಿದರು. ಸರ್ಕಾರ ಭತ್ತಕ್ಕೆ ಕಡಿಮೆ ಬೆಲೆ ನಿಗದಿ ಮಾಡಿ ರೈತರನ್ನು ವಂಚಿಸುತ್ತಿದೆ. ರಾಸಾಯನಿಕ ಗೊಬ್ಬರ ಬಾರಿ ದುಬಾರಿಯಾಗಿ ಭತ್ತ ಕಟಾವು ದರ ಹೆಚ್ಚಳವಾಗಿದೆ. ಇದರಿಂದ ರೈತರು ನಷ್ಟಕ್ಕೆ ಸಿಲುಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭತ್ತ ಖರೀದಿಯಲ್ಲಿ ದಳ್ಳಾಳಿಗಳ ಕಾಟ ಹೆಚ್ಚಾಗಿದ್ದರೂ ಸರ್ಕಾರ ಅವರ ಪರ ಕೆಲಸ ಮಾಡುತ್ತಿದೆ. ಸುಗ್ಗಿಯಲ್ಲಿ ಭತ್ತ ಕಟಾವು ಮಾಡಿದ ವೇಳೆ ಖರೀದಿ ಕೇಂದ್ರ ತೆರೆಯದೇ ಸುಗ್ಗಿ ಮುಗಿದ ನಂತರ ಖರೀದಿ ಕೇಂದ್ರ ತೆರೆಯುತ್ತದೆ ಎಂದು ಕಿಡಿಕಾರಿದರು.
ರೈತರು ಜಮೀನುಗಳ ಬಳಿ ಭತ್ತ ಇಟ್ಟುಕೊಳ್ಳಲಾಗದೆ ದಳ್ಳಾಳಿಗಳ ಮೊರೆ ಹೋಗುವ ಪರಿಸ್ಥಿತಿ ಎದುರಾಗಿದೆ. ಕಡಿಮೆ ದರಕ್ಕೆ ಒಪ್ಪಂದ ಮಾಡಿಕೊಂಡು ಭತ್ತವನ್ನು ಖರೀದಿ ಮಾಡಲಾಗುತ್ತಿದೆ. ಇದರಿಂದ ಭತ್ತ ಬೆಳೆದ ರೈತರಿಗೆ ನಷ್ಟವಾಗುತ್ತಿದೆ. ಸರ್ಕಾರಗಳ ಧೋರಣೆ ಕಾರಣ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಹೆಚ್ಚು ಭತ್ತ ಬೆಳೆಯುವ ಪ್ರದೇಶ ಬೆಳಗೊಳ ಹೋಬಳಿಯಾಗಿದೆ. ದಳ್ಳಾಳಿಗ ಮೂಲಕ ಭತ್ತ ಖರೀದಿ ಮಾಡಿ ಭತ್ತದಲ್ಲಿನ ತೂಕದಲ್ಲಿ ಮೋಸ ಮಾಡುತ್ತಿದ್ದು, ರೈಸ್ ಮಿಲ್‌ನ ತೂಕ ಮಾಪಕದ ಯಂತ್ರಗಳನ್ನು ಪರಿಶೀಲಿಸಬೇಕು. ತೂಕದಲ್ಲಿ ಮೋಸ ಮಾಡಿ ಖರೀದಿಸುವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಮೋಸಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಕೃಷಿ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ, ಶಿರಸ್ತೇದಾರ್ ನಾಗೇಶ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಭತ್ತ ಬೆಳೆಗಾರರ ಹೋರಾಟ ಸಮಿತಿ ಸದಸ್ಯರಾದ ವಾಸು ಬೆಳಗೊಳ, ವಿಷಕಂಠು, ಸ್ವಾಮೀಗೌಡ, ಪುಟ್ಟರಾಜು, ಸುರೇಶ್, ಜಗದೀಶ್, ಮಹೇಶ್, ಭಾಸ್ಕರ್, ಮಂಜುನಾಥ ಬಿ.ಎಸ್.ರವಿಕುಮಾರ್, ವೆಂಕಟೇಶ್, ದಿನೇಶ್ ಸೇರಿದಂತೆ ಇತರ ರೈತ ಮುಖಂಡರು ಭಾಗವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.