ಅರಣ್ಯಭೂಮಿ ಒತ್ತುವರಿ ತೆರವಿಗೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Dec 10, 2024 12:33 AM

ಸಾರಾಂಶ

ಪ್ರತಿಭಟನೆಯಲ್ಲಿ ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಫೋಟೋ ಇಟ್ಟಿರುವುದಕ್ಕೆ ವಿರೋಧ ವ್ಯಕ್ತವಾಯಿತು. ನಂತರ ಕಾಂಗ್ರೆಸ್ ಕಾರ್ಯಕರ್ತರು ಹಾಗು ಮುಖಂಡರು ತಹಸೀಲ್ದಾರ್ ಕಚೇರಿ ಆವರವಣದಲ್ಲಿ ಜಮಾಯಿಸಿ ಪ್ರತಿಭಟನಾಕಾರರ ಜತೆ ವಾಗ್ವಾದ ನಡೆಸಿದಾಗ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ ಎರಡು ಕಡೆಯವರನ್ನು ಚದುರಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಕಚೇರಿ ಮುಂದೆ ರೈತಸಂಘ ಮತ್ತು ಹಸಿರುಸೇನೆ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ನಡೆಸಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಬಲಾಡ್ಯರು ಒತ್ತುವರಿ ಮಾಡಿಕೊಂಡಿರುವ ಸಾವಿರಾರು ಎಕರೆ ಅರಣ್ಯ ಜಮೀನನ್ನು ಜಂಟಿ ಸರ್ವೆ ನಡೆಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ವೇಳೆ ಡಾ.ಅಂಬೇಡ್ಕರ್, ಮಹಾತ್ಮ ಗಾಂಧಿ ಹಾಗೂ ಮಾಜಿ ಸ್ಪೀಕರ್‌ ರಮೇಶ್‌ಕುಮಾರ ಭಾವಚಿತ್ರವನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಿದರು.

ರಮೇಶ್‌ಕುಮಾರ್‌ ಫೋಟೋಗೆ ವಿರೋಧ

ಆದರೆ ಪ್ರತಿಭಟನಾಕಾರರು ರಮೇಶ್‌ಕುಮಾರ್‌ ಫೋಟೋ ಇಟ್ಟಿರುವದಕ್ಕೆ ಗೌನಿಪಲ್ಲಿ ಗ್ರಾಪಂನ ರಮೇಶ್‌ಬಾಬು ವಿರೋಧ ವ್ಯಕ್ತಪಡಿಸಿದಾಗ ರೈತ ಮುಖಂಡರ ಹಾಗೂ ರಮೇಶ್ ಬಾಬುರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಕಾಂಗ್ರೆಸ್ ಕಾರ್ಯಕರ್ತರು ಹಾಗು ಮುಖಂಡರು ತಹಸೀಲ್ದಾರ್ ಕಚೇರಿ ಆವರವಣದಲ್ಲಿ ಜಮಾಯಿಸಿ ಪ್ರತಿಭಟನಾಕಾರರ ಜತೆ ವಾಗ್ವಾದ ನಡೆಸಿದಾಗ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ ಎರಡು ಕಡೆಯವರನ್ನು ಚದುರಿಸಿದರು.

ರೈತ ಸಂಘದ ಹೆಸರಿನಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತ ಮುಖಂಡ ನಾರಾಯಣಗೌಡ ಬಣದವರು ನಿಜವಾದ ರೈತರಲ್ಲ. ಇವರು ಪೇಮೆಂಟ್ ಗಿರಾಕಿಗಳು ಎಂದು ಕಾಂಗ್ರೆಸ್‌ ಕಾರ್ಯಕರ್ತರು ರೈತ ಮುಖಂಡರ ವಿರುದ್ಧ ಧಿಕ್ಕಾರ ಕೂಗಿ, ರಮೇಶ್‌ಕುಮಾರ್ ಪರ ಜೈಕಾರ ಕೂಗುತ್ತಾ ಪ್ರತಿಭಟನಾಕಾರರ ಮೇಲೆ ಮುಗಿಬೀಳಲು ಯತ್ನಿಸಿದರು.

ಈ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಆಗ ಪೊಲೀಸರು ಮಧ್ಯೆ ಪ್ರವೇಶಿಸಿ ರೈತ ಮುಖಂಡರನ್ನು ತಹಸೀಲ್ದಾರ್ ಕಚೇರಿ ಆವರಣದ ಒಳಗೆ ಕರೆದೊಯ್ದು ರಕ್ಷಿಸಿದರು. ಇದೇ ಸಮಯದಲ್ಲಿ ರೈತ ಮುಖಂಡರು ನ್ಯಾಯಕ್ಕಾಗಿ ಘೋಷಣೆ ಕೂಗಿದರು. ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರೈತ ಮುಖಂಡರನ್ನು ಸಮಾಧಾನಪಡಿಸುವ, ಸಂದಾನ ನಡೆಸುವ ಪ್ರಕಿಯೆಗಳು ನಡೆದವು.

ಅಂಬೇಡ್ಕರ್‌ ಫೋಟೋಗೆ ಅವಮಾನ

ತಾಲೂಕು ದಲಿತ ಮುಂಖಡ ರಾಮಾಂಜಮ್ಮ ಮಾತನಾಡಿ, ರಮೇಶ್‌ಕುಮಾರ್ ಭಾವಚಿತ್ರ ಇಟ್ಟು ಅವರ ಹೆಸರಿಗೆ ತೇಜೋವಧೆ ಮಾಡುತ್ತಿದ್ಧೀರಿ ಎಂದು ಪ್ರಶ್ನಿಸಿ, ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಧಾವೆ ಇದ್ದು, ಈಗಾಗಲೇ ಜಂಟಿ ಸರ್ವೇ ಆಗಿದೆ. ನಾವು ರಮೇಶ್‌ಕುಮಾರ್‌ರ ಭಾವಚಿತ್ರವನ್ನು ತೆಗೆಯುವಂತೆ ಒತ್ತಡ ಹೇರಿದಾಗ ರಮೇಶ್‌ಕುಮಾರ್ ಭಾವಚಿತ್ರವನ್ನು ತೆಗದು ಪ್ರತಿಭಟನಾನಿರತರು ಅಂಬೇಡ್ಕರ್ ಭಾವಚಿತ್ರವನ್ನು ಎಲ್ಲಿ ಬಿಸಾಕಿದರೋ ಗೊತ್ತಿಲ್ಲ. ಅಂಬೇಡ್ಕರ್‌ರವರಿಗೆ ಅಪಮಾನ ಮಾಡಿದ್ದಾರೆ. ಇದನ್ನ ನಾವು ಖಂಡಿಸುತ್ತೇವೆ ಎಂದರು.

ಜಂಟಿ ಸರ್ವೆಗೆ ರೈತಸಂಘ ಅಗ್ರಹ

ರೈತ ಮುಖಂಡ ನಾರಾಯಣಗೌಡ ಹೇಳುವಂತೆ ರಾಯಲ್ಪಾಡು ಹೋಬಳಿ ಜಿನಗಲಕುಂಟೆ ರಾಜ್ಯ ಅರಣ್ಯ ವ್ಯಾಪ್ತಿಯ ಹೊಸಹುಡ್ಯ ಅರಣ್ಯ ಭೂಮಿ ಒತ್ತುವರಿ ಮಾಡಿಕೊಳ್ಳಲಾಗಿದ್ದು ಸರ್ವೆ ನಂ ೧ ಮತ್ತು ೨ ರಲ್ಲಿ, ೬೨ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ ಈ ಕುರಿತಾಗಿ ನವಂಬರ್ ೬ ರಂದು ಅರಣ್ಯ ಇಲಾಖೆ ಹಾಗು ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು.ಆದರೆ ಸರ್ವೇ ಮಾಡಲು ಆಸಕ್ತಿ ತೊರದ ಕಂದಾಯ ಇಲಾಖೆ ಸಬೂಬು ಹೇಳಿಕೊಂಡು ಮುಂದೂಡುತ್ತಿದೆ. ಕಾಯ್ದೆ ಮಾಡುವವರೇ ಕಾನೂನನ್ನು ಮುರಿಯುತ್ತಿದ್ದಾರೆ. ಇಂತಹ ಅಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿರುವ ಇಲ್ಲಿನ ತಹಶೀಲ್ದಾರ್ ಈ ಕೂಡಲೇ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಹಲವು ಬಲಾಢ್ಯರು ಒತ್ತುವರಿ ಮಾಡಿರುವ ಅರಣ್ಯಭೂಮಿಯನ್ನು ತೆರವು ಗೊಳಿಸಬೇಕು ಎಂದು ನಾರಾಯಣಗೌಡ ಒತ್ತಾಯಿಸಿದರು.೮ಎಸ್.ವಿ.ಪುರ-೧-೧......ಶ್ರೀನಿವಾಸಪುರ ತಾಲೂಕು ಕಚೇರಿ ಮುಂದೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಜಮಾಯಿಸಿರುವ ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಬೆಂಬಲಿತ ಕಾಂಗ್ರೆಸ್‌ ಕಾರ್ಯಕರ್ತರು..

Share this article