ಕೊಳಚೆಪ್ರದೇಶ ಡಿನೋಟಿಫಿಕೇಶನ್‌ಗೆ ಆಗ್ರಹಿಸಿ ಧರಣಿ

KannadaprabhaNewsNetwork | Published : Apr 6, 2025 1:49 AM

ಸಾರಾಂಶ

ಗಾಂಧಿನಗರದಿಂದ ಹೊರಟ ಮೆರವಣಿಗೆಯು ಪಟ್ಟಣದ ಶಿವಾಜಿ ಸರ್ಕಲ್ ಸೇರಿದಂತೆ ಪ್ರಮುಖ ಬೀದಿಗಳ ಮೂಲಕ ಸಂಚರಿಸಿತು.

ಮುಂಡಗೋಡ: ಮುಂಡಗೋಡ ಗಾಂಧಿನಗರದ ಸರ್ವೇ ನಂ.೧೮೬ರಲ್ಲಿ ಹಿರಿಯ ನಾಗರಿಕರು ವಾಸಿಸುತ್ತಿರುವ ೨೫ ಎಕರೆ ಪ್ರದೇಶವನ್ನು ಕೊಳಚೆಪ್ರದೇಶವೆಂದು ಘೋಷಿಸಿದ ಅಧಿಸೂಚನೆ ತಿದ್ದುಪಡಿಗೆ (ಡಿನೋಟಿಫಿಕೇಶನ್) ಆಗ್ರಹಿಸಿ ಗಾಂಧಿನಗರ ಅಭಿವೃದ್ಧಿ ಸಮಿತಿ ಶನಿವಾರ ಪಟ್ಟಣದಲ್ಲಿ ಧರಣಿ ನಡೆಸಿತು.

ಗಾಂಧಿನಗರದಿಂದ ಹೊರಟ ಮೆರವಣಿಗೆಯು ಪಟ್ಟಣದ ಶಿವಾಜಿ ಸರ್ಕಲ್ ಸೇರಿದಂತೆ ಪ್ರಮುಖ ಬೀದಿಗಳ ಮೂಲಕ ಸಂಚರಿಸಿತು. ಸಂಪೂರ್ಣ ಮೂಲಭೂತ ಸೌಲಭ್ಯ ಹೊಂದಿದ ಗಾಂಧಿನಗರ ಬಡಾವಣೆಯನ್ನು ಸ್ಲಂ ಆಗಿ ಘೋಷಿಸಿದ ಕೊಳಚೆ ಮಂಡಳಿ ವಿರುದ್ಧ ಘೋಷಣೆ ಕೂಗುತ್ತಾ ಸಾಗಿದರು. ಬಳಿಕ ಪಪಂಗೆ ಆಗಮಿಸಿ ಧರಣಿ ಕುಳಿದರು.

೧೯೭೯/೧೯೮೦ರಲ್ಲಿ ಕಬಲಾಯತ್ ಪಟ್ನಾ ಪಡೆದು ಮಂಜೂರಾದ ನಿವೇಶನದಲ್ಲಿ ೪೪ ವರ್ಷದಿಂದ ಮನೆ ಕಟ್ಟಿಕೊಂಡಿದ್ದಾರೆ. ೨೪*೭ ನೀರು, ಎಲ್ಲ ಕಡೆ ಚರಂಡಿ ವ್ಯವಸ್ಥೆ, ಪ್ರತಿ ಗಲ್ಲಿ ಗಲ್ಲಿಯಲ್ಲೂ ೨೦ರಿಂದ ೩೦ ಅಡಿ ಅಗಲ ಸಿಮೆಂಟ್ ಕಾಂಕ್ರಿಟ್ ರಸ್ತೆ, ಎಲ್ಲ ರಸ್ತೆಯಲ್ಲಿ ಬೀದಿದೀಪದ ವ್ಯವಸ್ಥೆ, ಹಾಸ್ಟೆಲ್, ಸ್ಕೂಲ್, ದೇವಸ್ಥಾನ, ಹೋಂ ಗಾರ್ಡ್ ಮೈದಾನ, ಕಚೇರಿಗಳು, ಅಂಬೇಡ್ಕರ್ ಭವನ, ಮರಾಠಾ ಸಮುದಾಯ ಭವನ, ಕೋಟಿ ಖರ್ಚು ಮಾಡಿ ಕಟ್ಟಿದ ಬೃಹತ್ ಬಂಗಲೆಗಳಿರುವ ಗಾಂಧಿನಗರ ೨೫ ಎಕರೆ ಪ್ರದೇಶದ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಸಮಿತಿ ರಚನೆ ಮಾಡಿದ್ದಾರೆ. ಸಮಿತಿಯ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿ ಸತ್ಯವಾದ ವರದಿ ನೀಡಬೇಕು ಎಂದು ಒತ್ತಾಯಿಸಿದರು.

ಬಳಿಕ ಸ್ಥಳಕ್ಕಾಗಮಿಸಿದ ನಗರಾಭಿವೃದ್ಧಿ ಕೋಶ ಅಭಿಯಂತರ ರವಿಕುಮಾರ, ಸ್ಲಂ ಬೋರ್ಡ್‌ ಸಹಾಯಕ ಎಂಜಿನಿಯರ್ ಪ್ರತೀಕ ದಳವಾಯಿ, ಗ್ರೇಡ್ ೨ ತಹಸೀಲ್ದಾರ ಚಂದ್ರಶೇಖರ ಹೊಸಮನಿ, ರವಿರಾಜ ದೀಕ್ಷಿತ ಮತ್ತು ಮುಂಡಗೋಡ ಪಪಂ ಮುಖ್ಯಾಧಿಕಾರಿ ಚಂದ್ರಶೇಖರ ತಂಡ ಮನವಿ ಸ್ವೀಕರಿಸಿ ಈ ಬಗ್ಗೆ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗೆ ಸೂಕ್ತ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದರು.

ಗಾಂಧಿನಗರ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಗಪ್ಪ ಕಿತ್ತೂರ, ಸಾಮಾಜಿಕ ಕಾರ್ಯಕರ್ತ ವೆಂಕಟೇಶ ಶಿರಾಲಿ, ರಮೇಶ ಮಳೆಕರ, ಶ್ರೀಮಂತ ಉಗ್ರಾಣ, ವೀರಭದ್ರಯ್ಯ ವಿರಕ್ತಿಮಠ, ಮಾರುತಿಗೌಡ್ರ ಶಿಗ್ಗಾವ್, ಪಿ.ಡಿ. ನಾಯ್ಕ, ಶರತ ಬಾಡಕರ, ರಮೇಶ ದೈವಜ್ಞ, ದಾಮೋದರ ವೆರ್ಣೇಕರ, ಉಲ್ಲಾಸ ನಾಯ್ಕ, ವಿ.ಡಿ. ನಾಯ್ಕ ಉಪಸ್ಥಿತರಿದ್ದರು.

Share this article