ವಸತಿ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Jul 5, 2024 12:56 AM

ಸಾರಾಂಶ

ಗೋಸಾವಿ ಅಲೆಮಾರಿ ಸಮುದಾಯದ ಕುಟುಂಬಗಳು ಕಳೆದ ಹಲವಾರು ದಶಕಗಳಿಂದ ಚಿಂದಿ ಆಯುವ ಹಾಗೂ ಅಸಂಘಟಿತ ಕಾರ್ಮಿಕರಾಗಿ ಕೆಲಸ ಮಾಡುತ್ತ ಯಾವುದೇ ನಾಗರಿಕ ಸೌಲಭ್ಯಗಳು ಇಲ್ಲದೇ ಅನೇಕ ಹಿಂಸೆ ಮತ್ತು ದೌರ್ಜನ್ಯ ಸಹಿಸುತ್ತಾ ಪ್ರಾಣಿಗಳಿಗಿಂತ ಕೀಳಾಗಿ ಬದುಕನ್ನು ನಡೆಸುತ್ತಿದ್ದಾರೆ

ಗದಗ: ಅವಳಿ ನಗರದ ಸ್ಲಂ ಪ್ರದೇಶದ ನಿವಾಸಿಗಳು ಮೂಲಭೂತ ಸೌಲಭ್ಯಗಳು ಇಲ್ಲದೇ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಗೋಸಾವಿ ಸ್ಲಂ ಪ್ರದೇಶದ ಅಲೆಮಾರಿ ಸಮುದಾಯದ ಕುಟುಂಬಗಳು ಹಲವು ದಶಕಗಳಿಂದ ವಸತಿ ಹಾಗೂ ನಾಗರಿಕ ಸೌಲಭ್ಯ ಇಲ್ಲದೇ ನರಕಯಾತನೆ ಅನುಭವಿಸುತ್ತಿದ್ದು, ಅಲೆಮಾರಿ ಸಮುದಾಯಗಳಿಗೆ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಸ್ಲಂ ಜನಾಂದೋಲನ-ಕರ್ನಾಟಕ, ಜಿಲ್ಲಾ ಸ್ಲಂ ಸಮಿತಿಯ ವತಿಯಿಂದ ನಗರಸಭೆ ಎದುರು ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ.ಆರ್. ಮಾನ್ವಿ ಮಾತನಾಡಿ, ಗೋಸಾವಿ ಅಲೆಮಾರಿ ಸಮುದಾಯದ ಕುಟುಂಬಗಳು ಕಳೆದ ಹಲವಾರು ದಶಕಗಳಿಂದ ಚಿಂದಿ ಆಯುವ ಹಾಗೂ ಅಸಂಘಟಿತ ಕಾರ್ಮಿಕರಾಗಿ ಕೆಲಸ ಮಾಡುತ್ತ ಯಾವುದೇ ನಾಗರಿಕ ಸೌಲಭ್ಯಗಳು ಇಲ್ಲದೇ ಅನೇಕ ಹಿಂಸೆ ಮತ್ತು ದೌರ್ಜನ್ಯ ಸಹಿಸುತ್ತಾ ಪ್ರಾಣಿಗಳಿಗಿಂತ ಕೀಳಾಗಿ ಬದುಕನ್ನು ನಡೆಸುತ್ತಿದ್ದಾರೆ. ಈ ಭಾಗದ ಜನಪ್ರತಿನಿಧಿಗಳು ಹಲವಾರು ವರ್ಷಗಳಿಂದ ಆಶ್ರಯ ಯೋಜನೆ ಹಾಗೂ ಅನೇಕ ವಸತಿ ಯೋಜನೆಯಲ್ಲಿ ಸಾವಿರಾರು ಮನೆ ಹಂಚಿಕೆ ಮಾಡಿದ್ದಾರೆ. ಆದರೆ ವಸತಿ ಸೌಲಭ್ಯಗಳಿಂದ ವಂಚಿತವಾದ ಗೋಸಾವಿ ಸಮುದಾಯದ ಜನರಿಗೆ ಈವರೆಗೊ ವಸತಿ ಭಾಗ್ಯ ದೊರಕಿಸಿ ಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಸ್ಲಂ ಸಮಿತಿಯಿಂದ ಅನೇಕ ಹೋರಾಟಗಳ ಮೂಲಕ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳು ಮತ್ತು ಸ್ಲಂ ಬೋರ್ಡ ಅಧಿಕಾರಿಗಳು ನಿರ್ಲಕ್ಷ್ಯ ಮತ್ತು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಗೋಸಾವಿ ಪ್ರದೇಶ ಘೋಷಣೆಗಾಗಿ ಸ್ಲಂ ಬೋರ್ಡಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ 2 ವರ್ಷ ಕಳೆದರೂ ಸ್ಲಂ ಬೋರ್ಡ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಗೋಸಾವಿ ಪ್ರದೇಶವನ್ನು ಕೂಡಲೇ ಘೋಷಣೆ ಮಾಡಿ ಸ್ಥಳೀಯ ಕುಟುಂಬಗಳಿಗೆ ಶೀಘ್ರವೇ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಸ್ಥಳೀಯ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸದೇ ಸ್ಥಳಾಂತರ ಮಾಡಲು ನಗರಸಭೆ ಮುಂದಾದರೆ ಸ್ಲಂ ಸಮಿತಿಯ ನೇತೃತ್ವದಲ್ಲಿ ನಗರಸಭೆ ಹಾಗೂ ಸ್ಲಂ ಬೋರ್ಡ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.

ಈ ವೇಳೆ ಮುಖಂಡರಾದ ದುರ್ಗಪ್ಪ ನವಲಗುಂದ, ಸ್ಲಂ ಸಮಿತಿ ಉಪಾಧ್ಯಕ್ಷ ರವಿಕುಮಾರ ಬೆಳಮಕರ, ಪ್ರಧಾನ ಕಾರ್ಯದರ್ಶಿ ಅಶೋಕ ಕುಸಬಿ, ಮೆಹರುನಿಸಾ ಢಾಲಾಯತ, ಶಂಕ್ರಪ್ಪ ರೋಣ, ಮೆಹರುನಿಸಾ ಡಂಬಳ, ಮೈಮುನ ಬೈರಕದಾರ, ಮಕ್ತುಮ ಮುಲ್ಲಾನವರ, ಇಬ್ರಾಹಿಂ ಮುಲ್ಲಾ, ಮಲೇಶಪ್ಪ ಕಲಾಲ, ಪ್ರಕಾಶ ಹಡಗಲಿ, ಸಾಕ್ರುಬಾಯಿ ಗೋಸಾವಿ, ದಾದು ಗೋಸಾವಿ, ಖಾಜೇಸಾಬ ಇಸ್ಮಾಯಿಲನವರ, ದುರ್ಗಪ್ಪ ಮಣ್ಣವಡ್ಡರ, ರವಿ ಗೋಸಾವಿ, ಮಾಲಾಬಾಯಿ ಗೋಸಾವಿ, ಮಂಜುನಾಥ ಶ್ರೀಗಿರಿ, ಶಿವಾನಂದ ಶಿಗ್ಲಿ ಹಾಗೂ ಸ್ಲಂ ನಿವಾಸಿಗಳು ಇದ್ದರು.

Share this article