ಯಲಬುರ್ಗಾ:
ಅಂಗನವಾಡಿ ನೌಕರರ ಸಂಘದ ತಾಲೂಕಾಧ್ಯಕ್ಷೆ ಲಲಿತಾ ಅರಳಿ ಮಾತನಾಡಿ, ದೇಶದ ಭವಿಷ್ಯ ರೂಪಿಸುವ ಮಾನವ ಸಂಪನ್ಮೂಲದ ಬೆಳವಣಿಗೆಗೆ ದುಡಿಯುತ್ತಿರುವ ಅಂಗನವಾಡಿ ನೌಕರರಿಗೆ ಕನಿಷ್ಠ ವೇತನ ನೀಡುತ್ತಿಲ್ಲ. ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್)ಅಡಿ ೫೦ ವರ್ಷಗಳಿಂದ ಅಂಗನವಾಡಿ ನೌಕರರು ದುಡಿಯುತ್ತಿದ್ದಾರೆ. ಸಾಮಾಜಿಕ ನ್ಯಾಯದಡಿ ಯೋಜನೆ ಕಾಯಂ ಮಾಡಬೇಕು. ಕಾಯಂ ಮಾಡುವವರೆಗೆ ಕನಿಷ್ಠ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ವಾಲ್ಮೀಕಿ ಮಾತನಾಡಿ, ಕೇಂದ್ರ ಸರ್ಕಾರ ಪಾರ್ಲಿಮೆಂಟ್‌ನಲ್ಲಿ ನಾಲ್ಕು ಲೇಬರ್ ಕೋಡ್ ಅಂಗೀಕರಿಸಿ, ಕಾರ್ಮಿಕ ವಿರೋಧಿ ಅಂಶ ಜಾರಿಗೊಳಿಸಲು ಮುಂದಾಗಿರುವುದು ಖಂಡನೀಯ. ಸರ್ಕಾರ ಕಾನೂನು ತಿದ್ದುಪಡಿ ಜಾರಿಗೊಳಿಸಿದ್ದಲ್ಲಿ ಗ್ರಾಪಂನಲ್ಲಿ ದುಡಿಯುತ್ತಿರುವ ನೌಕರರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ೪ ಲೇಬರ್ ಕೋಡ್ ಜಾರಿ ಮಾಡಬಾರದು ಎಂದರು.ಅಕ್ಷರ ದಾಸೋಹ ನೌಕರರ ಸಂಘದ ತಾಲೂಕಾಧ್ಯಕ್ಷ ಶಿವನಗೌಡ ಮಾಲಿ ಪಾಟೀಲ್ ಮಾತನಾಡಿ, ಅಕ್ಷರ ದಾಸೋಹ ನೌಕರರ ಕೆಲಸದ ಅವಧಿ ಬದಲಾಯಿಸಬೇಕು. ಅಕ್ಷರ ದಾಸೋಹವು ಶಿಕ್ಷಣ ಇಲಾಖೆಯಡಿ ನಡೆಯಬೇಕು. ಬಿಸಿಯೂಟ ಯೋಜನೆಯನ್ನು ಯಾವುದೇ ಖಾಸಗಿ ಸಂಸ್ಥೆಗಳಿಗೆ ಜವಾಬ್ದಾರಿ ಕೊಡಬಾರದು ಎಂದು ಆಗ್ರಹಿಸಿದರು.
ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್, ತಾಲೂಕಾಧ್ಯಕ್ಷ ಅಬ್ದುಲ್ ರಜಾಕ್, ಗ್ರಾಪಂ ನೌಕರರ ಸಂಘದ ಉಪಾಧ್ಯಕ್ಷ ಚನ್ನಪ್ಪ ಬಂಡಿಹಾಳ, ಅಕ್ಷರ ದಾಸೋಹ ನೌಕರರ ಸಂಘದ ತಾಲೂಕಾಧ್ಯಕ್ಷೆ ರೇಣುಕಾ ಬಂಡಿಹಾಳ, ಉಪಾಧ್ಯಕ್ಷೆ ಪದ್ಮಾವತಿ ಕುಡಗುಂಟಿ, ದುರಗಪ್ಪ ಪೂಜಾರ, ರವೀಂದ್ರ ಜೋಶಿ, ನಾರಾಯಣ ದೊಡ್ಮನಿ, ಪಾರ್ವತಿ ಚಲವಾದಿ, ಬಸಮ್ಮ ಉಣಚಗೇರಿ, ವೇದಾ ದೇಸಾಯಿ, ಲಕ್ಷ್ಮವ್ವ ಚಿಣಗಿ, ಜಯಶ್ರೀ ತೋಟದಮನಿ ಇದ್ದರು.