ಕಾಳಿದಾಸ ನಗರದಲ್ಲಿ ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Jan 04, 2024, 01:45 AM IST
3ಕೆಪಿಎಲ್22 ಕೊಪ್ಪಳ ನಗರದ ಕಾಳಿದಾಸ ನಗರದ ನಿವಾಸಿಗಳು ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ ಬುಧುವಾರ ನಗರಸಭೆ ಎದುರು ಪ್ರತಿಭಟನೆಯನ್ನು ನಡೆಸಿದರು. | Kannada Prabha

ಸಾರಾಂಶ

ಸೊಳ್ಳೆ ಹಾವಳಿಯಿಂದ ಮಕ್ಕಳು, ಮಹಿಳೆಯರು, ವೃದ್ಧರು ಈಗಾಗಲೇ ಡೆಂಘೀದಂತಹ ರೋಗಗಳಿಂದಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೂಡಲೇ ಕಾಳಿದಾಸ ನಗರ ಜನರ ಆರೋಗ್ಯ ಕಾಪಾಡಿ ಸ್ವಚ್ಛತೆ ಕಾಪಾಡಬೇಕು.

ಕೊಪ್ಪಳ: ವೈಜ್ಞಾನಿಕ ಚರಂಡಿ ನಿರ್ಮಾಣ ಸೇರಿದಂತೆ ಕಾಳಿದಾಸ ನಗರಕ್ಕೆ ಮೂಲಭೂತ ಸೌಕರ್ಯಗಳನ್ನು ನೀಡುವಂತೆ ಆಗ್ರಹಿಸಿ ಬುಧುವಾರ ನಗರದ ನಗರಸಭೆ ಎದುರು ಎಸ್‌ಯುಸಿಐ (ಕಮ್ಯುನಿಸ್ಟ್) ವತಿಯಿಂದ ದಿಢೀರ್ ಪ್ರತಿಭಟನೆ ನಡೆಸಲಾಯಿತು.

ಪಕ್ಷದ ಮುಖಂಡರಾದ ಶರಣು ಗಡ್ಡಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಕೊಪ್ಪಳದ ಕಾಳಿದಾಸ ನಗರದಲ್ಲಿ ಕನಿಷ್ಠ ಮೂಲಭೂತ ಸೌಕರ್ಯ ಇಲ್ಲದೇ ನಿವಾಸಿಗಳು ದಿನನಿತ್ಯ ನಾನಾ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಮುಖ್ಯವಾಗಿ ಚರಂಡಿ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ನಿರ್ಮಿಸಿಲ್ಲ. ನೀರು ಸಂಗ್ರಹವಾಗದಂತೆ ಹರಿಯಲು ಚರಂಡಿ ನಿರ್ಮಾಣ ಮಾಡಬೇಕೆಂದರು.

ಈ ಹಿಂದೆ ಕಾಳಿದಾಸ ನಗರದ ನಿವಾಸಿಗಳೊಂದಿಗೆ ಕೊಪ್ಪಳ ನಗರಸಭೆ ಆಯುಕ್ತರಿಗೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಗಿತ್ತು. ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಸರಿಯಾದ ಕ್ರಮ ಕೈಗೊಂಡಿಲ್ಲ. ಇದು ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಕನಿಷ್ಠ ಅವಶ್ಯಕತೆಗಳಾದ ಚರಂಡಿ, ಬೀದಿ ದೀಪ, ರಸ್ತೆ, ಸ್ವಚ್ಛತೆ, ಕುಡಿಯುವ ನೀರಿನಲ್ಲಿ ಚರಂಡಿ ನೀರು ಬರದಂತೆ ಹಾಗೂ ಸೊಳ್ಳೆಗಳು ನಿಯಂತ್ರಣ ಮಾಡಬೇಕಾಗಿತ್ತು. ಸಂಜೆಯಾದರೆ ಸಾಕು ಸೊಳ್ಳೆಗಳು ಮನೆ ಒಳಗೆ ಜೇನು ನೊಣಗಳಂತೆ ಬರುತ್ತವೆ. ಚರಂಡಿ ನೀರು ರಸ್ತೆ ಮೇಲೆ ಬಂದು ದುರ್ವಾಸನೆಯಿಂದ ಮನೆಯ ಬಾಗಿಲು ಹಾಕಲೇಬೇಕಾದ ಪರಿಸ್ಥಿತಿ ಇದೆ ಎಂದರು.ಸೊಳ್ಳೆ ಹಾವಳಿಯಿಂದ ಮಕ್ಕಳು, ಮಹಿಳೆಯರು, ವೃದ್ಧರು ಈಗಾಗಲೇ ಡೆಂಘೀದಂತಹ ರೋಗಗಳಿಂದಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೂಡಲೇ ಕಾಳಿದಾಸ ನಗರ ಜನರ ಆರೋಗ್ಯ ಕಾಪಾಡಿ ಸ್ವಚ್ಛತೆ ಕಾಪಾಡಬೇಕು. ನೀರು ನಿಲ್ಲದಂತೆ ಚರಂಡಿ ವ್ಯವಸ್ಥೆಯನ್ನು ಕೂಡಲೇ ನಿರ್ಮಿಸಬೇಕು. ಮಹಿಳೆಯರಿಗಾಗಿ ಸಾಮೂಹಿಕ ಶೌಚಾಲಯ, ಶುದ್ಧ ಕುಡಿಯುವ ನೀರು, ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.ಪಕ್ಷದ ಸದಸ್ಯರಾದ ಶರಣು ಪಾಟೀಲ್, ರಮೇಶ್ ವಂಕಲಕುಂಟಿ, ಗಂಗರಾಜು ಅಳ್ಳಳ್ಳಿ, ಮಲ್ಲಪ್ಪ ಮಾದಿನೂರು, ಮಂಜುಳಾ, ದೇವರಾಜ್ ಹೊಸಮನಿ ಇದ್ದರು.ಕಾಳಿದಾಸ ನಗರದ ನಿವಾಸಿಗಳಾದ ಉಮೇಶ್ ಆವಾಜಿ, ಮುದಿಯಪ್ಪ ಹದ್ದಿನ, ರಮೇಶ್ ಆವಾಜಿ, ಪ್ರಕಾಶ್ ಗೌಡರ್, ಮಂಜುನಾಥ್ ಸಜ್ಜನ್, ರಫಿ, ಮಲ್ಲಿಕಾರ್ಜುನ್ ಗುಬ್ಬಿ, ರೆಣಮ್ಮ, ದುರುಗಮ್ಮ, ಸತ್ಯಮ್ಮ, ಸುಮಾ, ಹಾಗೂ ಕಾಳಿದಾಸ್ ನಗರದ ನಿವಾಸಿಗಳು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ