ನಾಳೆ ವಾರಾಬಂದಿ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Oct 23, 2026, 01:15 AM IST
ಮಾಜಿ ಸಚಿವ ರಾಜೂಗೌಡ ಮಾಧ್ಯಮಗಳೊಂದಿಗೆ ಮಾತನಾಡಿದರು. | Kannada Prabha

ಸಾರಾಂಶ

ತಾಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಿಂದ ಎಡ ಮತ್ತು ಬಲ ದಂಡೆ ಕಾಲುವೆಗಳ ವಾರಾಬಂದಿ ಪದ್ಧತಿ ರದ್ದುಪಡಿಸಿ ನ.15 ರವರೆಗೆ ನಿರಂತರ ನೀರು ಹರಿಸುವಂತೆ ಆಗ್ರಹಿಸಿ ಅ.24ರಂದು ದೇವಾಪುರ ಕ್ರಾಸ್‌ನ ಬೆಂಗಳೂರು ಬೀದರ್ ರಾಜ್ಯ ಹೆದ್ದಾರಿ ಬಂದ್ ಮಾಡಿ ಸರ್ಕಾರದ ವಿರುದ್ಧ ಪ್ರತಿಭಟಿಸಲಾಗುವುದು ಮಾಜಿ ಸಚಿವ ನರಸಿಂಹನಾಯಕ್‌ (ರಾಜೂಗೌಡ) ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಹುಣಸಗಿ

ತಾಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಿಂದ ಎಡ ಮತ್ತು ಬಲ ದಂಡೆ ಕಾಲುವೆಗಳ ವಾರಾಬಂದಿ ಪದ್ಧತಿ ರದ್ದುಪಡಿಸಿ ನ.15 ರವರೆಗೆ ನಿರಂತರ ನೀರು ಹರಿಸುವಂತೆ ಆಗ್ರಹಿಸಿ ಅ.24ರಂದು ದೇವಾಪುರ ಕ್ರಾಸ್‌ನ ಬೆಂಗಳೂರು ಬೀದರ್ ರಾಜ್ಯ ಹೆದ್ದಾರಿ ಬಂದ್ ಮಾಡಿ ಸರ್ಕಾರದ ವಿರುದ್ಧ ಪ್ರತಿಭಟಿಸಲಾಗುವುದು ಮಾಜಿ ಸಚಿವ ನರಸಿಂಹನಾಯಕ್‌ (ರಾಜೂಗೌಡ) ಕರೆ ನೀಡಿದರು.

ರಾಜ್ಯ ಸರ್ಕಾರ ಹಾಗೂ ಈ ಭಾಗದ ಜನಪ್ರತಿನಿಧಿಗಳೆಲ್ಲರೂ ಸೇರಿ ನಮ್ಮ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ ರಾಜೂಗೌಡ, ರೈತರು ಗೊಬ್ಬರ ಹಾಕಿ ಬೆಳೆದ ಬೆಳೆ ಈಗ ಕಟಾವಿಗೆ ಬಂದಿದೆ. ಈ ಹೊತ್ತಿನಲ್ಲಿ ನೀರು ಬಿಡದಿದ್ದರೆ ಬೆಳೆ ಒಣಗಿ ರೈತರು ಕಣ್ಣೀರು ಹಾಕುವ ಪರಿಸ್ಥಿತಿ ಬರುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ನಮ್ಮ ರೈತರಿಗೆ ನೀರು ಬಿಡಿಸುವವರೆಗೆ ನಮ್ಮ ಹೋರಾಟ ಇರುತ್ತದೆ. ಅ.24 ರಂದು ದೊಡ್ಡ ಪ್ರಮಾಣದಲ್ಲಿ ರಸ್ತೆ ತಡೆ ಮಾಡುತ್ತಿದ್ದೇವೆ ಎಂದು ಎಚ್ಚರಿಸಿದರು.

ರೈತರೇ, ನಿಮ್ಮ ನೀರಿನ ಹಕ್ಕಿಗಾಗಿ ನೀವೇ ಧ್ವನಿಯಾಗಿರಿ. ಅ.24ರಂದು ದೇವಾಪುರ ಕ್ರಾಸ್‌ಗೆ ಆಗಮಿಸಿ ಪ್ರತಿಭಟನೆಯಲ್ಲಿ ನೇರವಾಗಿ ಭಾಗವಹಿಸುವ ಮೂಲಕ ರೈತರ ಒಗ್ಗಟ್ಟಿನ ಶಕ್ತಿ ಪ್ರದರ್ಶಿಸೋಣ ಹಾಗೂ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯೋಣ ಎಂದು ಮಾಜಿ ಸಚಿವ ರಾಜುಗೌಡ ಕರೆ ನೀಡಿದರು.

ರೈತರ ಬೆಳೆಗಳಿಗೆ ಸಮರ್ಪಕವಾಗಿ ನೀರು ಒದಗಿಸುವುದು ಹಾಗೂ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸುವುದು ಈ ಹೋರಾಟದ ಪ್ರಮುಖ ಉದ್ದೇಶವ. ವಾರಾಬಂದಿ ಪದ್ಧತಿ ರದ್ದುಪಡಿಸಿ ನ.15ರವರೆಗೆ ನಿರಂತರವಾಗಿ ನೀರು ಹರಿಸುವಂತೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿ ಕರೆ ನೀಡಿದ್ದಾರೆ.

ರೈತರ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಡೆಯುತ್ತಿರುವ ಈ ಹೋರಾಟ ಪಕ್ಷಾತೀತವಾಗಿದ್ದು, ಯಾವುದೇ ರಾಜಕೀಯ ಭೇದಭಾವವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಭಾಗವಹಿಸಬೇಕು ಎಂದು ರಾಜೂಗೌಡ ಮನವಿ ಮಾಡಿದ್ದಾರೆ.

ಈ ಪ್ರತಿಭಟನೆಗೆ ವಿವಿಧ ಸಾಮೂಹಿಕ ಸಂಘಟನೆಗಳು ಬೆಂಬಲ ಸೂಚಿಸಿವೆ. ರೈತರು, ರೈತಪರ ಹೋರಾಟಗಾರರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.

ಹೋರಾಟಕ್ಕೆ ಕರವೇ ಬೆಂಬಲ: ಭೀಮುನಾಯಕ

ಹುಣಸಗಿ: ಭತ್ತದ ಬೆಳೆ ಕಾಳು ಕಟ್ಟುವ ನಿರ್ಣಾಯಕ ಹಂತದಲ್ಲಿರುವಾಗ ಜಾರಿಗೊಳಿಸಿರುವ ವಾರಾಬಂದಿ ಪದ್ಧತಿ ಅವೈಜ್ಞಾನಿಕವಾಗಿದ್ದು, ಇದರಿಂದ ರೈತರಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಯಾದಗಿರಿ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ತಿಳಿಸಿದರು.

ರೈತರ ಬೆಳೆಗಳಿಗೆ ಸಮರ್ಪಕವಾಗಿ ನೀರು ದೊರೆಯದಿದ್ದರೆ ಭತ್ತದ ಇಳುವರಿ ಕುಂಠಿತವಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಆತಂಕವಿದೆ. ಆದ್ದರಿಂದ ಸರ್ಕಾರ ಕೂಡಲೇ ವಾರಾಬಂದಿ ಪದ್ಧತಿ ರದ್ದುಪಡಿಸಿ ನ.15 ರವರೆಗೆ ನಾರಾಯಣಪುರ ಎಡ ಮತ್ತು ಬಲ ದಂಡೆ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸಬೇಕು ಎಂದು ಅವರು ಆಗ್ರಹಿಸಿದರು.

ಈ ಬೇಡಿಕೆಗಳ ಈಡೇರಿಕೆಗಾಗಿ ಅ.24ರಂದು ದೇವಾಪುರ ಕ್ರಾಸ್‌ನಲ್ಲಿ ರಾಜ್ಯ ಹೆದ್ದಾರಿ ತಡೆದು ನಡೆಯಲಿರುವ ರೈತರ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸಂಪೂರ್ಣ ಬೆಂಬಲ ನೀಡಲಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಹುಣಸಗಿ ಮತ್ತು ಸುರಪುರ ತಾಲೂಕು ಅಧ್ಯಕ್ಷರು, ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ರೈತರ ಹಿತದೃಷ್ಟಿಯಿಂದ ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಜಿ ಸಚಿವ ನರಸಿಂಹನಾಯಕ್‌ (ರಾಜೂಗೌಡ) ಹೇಳಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೈಸೂರು ದಸರಾದಲ್ಲಿ ಸ್ತ್ರೀ ಶಕ್ತಿಗೆ ಭಾರೀ ಮೆಚ್ಚುಗೆ
ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಭೂಮಿ ಕೊಡಲು ವಿಳಂಬ