ಕನ್ನಡಪ್ರಭ ವಾರ್ತೆ ನಾಗಮಂಗಲ
ಕನಿಷ್ಠ ವೇತನ ಮತ್ತು ಮಾಸಿಕ ಪಿಂಚಣಿ ಸೌಲಭ್ಯ ಕಲ್ಪಿಸುವ ಜೊತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದಿಂದ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕಳೆದ50 ವರ್ಷಗಳಿಂದ ಐಸಿಡಿಎಸ್ ಅಡಿಯಲ್ಲಿ ದುಡಿಯುತ್ತಿರುವ ಅಂಗನವಾಡಿ ನೌಕರರನ್ನು ಕಾಯಂಗೊಳಿಸುವವರೆಗೆ ಕನಿಷ್ಠ ವೇತನ ನೀಡಬೇಕು ಎಂದು ಘೊಷಣೆ ಕೂಗಿ ಸರ್ಕಾರವನ್ನು ಆಗ್ರಹಿಸಿದರು.
ದೇಶದ ಕಾರ್ಪೋರೇಟ್ ಬಂಡವಾಳಗಾರರಿಗೆ 15.32 ಲಕ್ಷ ಕೋಟಿ ಸಾಲ ಮನ್ನಾ ಮಾಡಿ 1.97 ಲಕ್ಷ ಕೋಟಿ ಸಬ್ಸಿಡಿಯನ್ನು ಉದಾರವಾಗಿ ನೀಡುವ ಕೇಂದ್ರ ಸರ್ಕಾರ ದೇಶದ ಭವಿಷ್ಯ ರೂಪಿಸಲು ಪೂರಕವಾದ ಮಾನವ ಸಂಪನ್ಮೂಲದ ಬೆಳವಣಿಗೆಗಾಗಿ ದುಡಿಯುತ್ತಿರುವ ಅಂಗನವಾಡಿ ನೌಕರರಿಗೆ ಕೊಡಲು ಸರ್ಕಾರದಲ್ಲಿ ಹಣವಿಲ್ಲವೇ ಎಂದು ಪ್ರಶ್ನಿಸಿದರು.ಕೇಂದ್ರ ಸರ್ಕಾರ ಎಫ್‌ಆರ್‌ಎಸ್ ವ್ಯವಸ್ಥೆಯನ್ನು ಮರುಪರಿಶೀಲಿಸಬೇಕು. ಎಫ್‌ಆರ್‌ಎಸ್ ಆಧರಿಸಿ ಪಡಿತರ ಸಾಮಗ್ರಿಗಳನ್ನು ನಿಲ್ಲಿಸಬಾರದು. ಟಿಎಚ್‌ಆರ್ ಮೂಲಕ ಫಲಾನುಭವಿಗಳ ಪೋಷಣ್ ಟ್ರ್ಯಾಕರ್‌ನ ಕೆಲಸಗಳಲ್ಲಿ ಅಂಗನವಾಡಿ ನೌಕರರಿಗೆ ತೊಂದರೆ ಕೊಡಬಾರದು.ಎಲ್ಲಾ ಅಂಗನವಾಡಿ ನೌಕರರನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
29 ಕಾರ್ಮಿಕ ಕಾನೂನುಗಳನ್ನು ಉಳಿಸಿ ಹೊಸದಾಗಿ ತಂದಿರುವ 4 ಸಂಹಿತೆಗಳನ್ನು ರದ್ದುಗೊಳಿಸಬೇಕು. ಮಾಸಿಕ 26 ಸಾವಿರ ರು. ಕನಿಷ್ಠ ವೇತನ ಹಾಗೂ 10 ಸಾವಿರ ರು. ಪಿಂಚಣಿ ನೀಡಬೇಕು. ರಾಜ್ಯದಲ್ಲಿ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಆರಂಭಿಸುವ ಜೊತೆಗೆ ಮೂಲ ಸೌಕರ್ಯ ಕಲ್ಪಿಸಬೇಕು. ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆರು ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಬೇಕು. ಅಂಗನವಾಡಿ ನೌಕರರನ್ನು ಬಿಎಲ್‌ಒ ಮತ್ತು ಜನಗಣತಿ ಕೆಲಸಗಳಿಗೆ ನೇಮಿಸಬಾರದು ಎಂದು ಆಗ್ರಹಿಸಿದರು.ಇದಕ್ಕೂ ಮುನ್ನ ಪಟ್ಟಣದ ಟಿ.ಮರಿಯಪ್ಪ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಈ ವೇಳೆ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಜಿ.ಆದರ್ಶ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಬಳಿಕ ಟಿ.ಮರಿಯಪ್ಪ ವೃತ್ತದಲ್ಲಿ ಪ್ರತಿಭಟನಾ ನಿರತ ಅಂಗನವಾಡಿ ನೌಕರರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಟಿ.ಬಿ.ಬಡಾವಣೆಯಲ್ಲಿ ಬಿಡುಗಡೆಗೊಳಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಘಟಕದ ಅಧ್ಯಕ್ಷೆ ಡಿ.ಎಂ.ಕಮಲ, ಉಪಾಧ್ಯಕ್ಷೆ ಜಯಲಕ್ಷ್ಮಮ್ಮ, ಕಾರ್ಯದರ್ಶಿ ಲತ, ಖಜಾಂಚಿ ಭಾರತಿ ಸೇರಿದಂತೆ ನೂರಾರು ಮಂದಿ ಅಂಗನವಾಡಿ ನೌಕರರು ಇದ್ದರು.