ಚನ್ನಪಟ್ಟಣ: ಕಳೆದ ಮೂರು ತಿಂಗಳಿನಿಂದ ಗ್ರಾಮದ ಹಾಲು ಉತ್ಪಾದಕರಿಗೆ ಹಾಲಿನ ಹಣ ಸಂಘ ಪಾವತಿಸಿಲ್ಲ ಎಂದು ಆರೋಪಿಸಿ ತಾಲೂಕಿನ ವಿರುಪಸಂದ್ರ ಹಾಲು ಉತ್ಪಾದಕ ರೈತರು, ಚನ್ನಪಟ್ಟಣ- ಸಾತನೂರು ರಸ್ತೆಯಲ್ಲಿ ಹಾಲಿನ ಕ್ಯಾನ್‌ಗಳನ್ನಿಟ್ಟು ಕೆಲ ಕಾಲ ರಸ್ತೆಯಲ್ಲಿ ವಾಹನ ತಡೆದು ಹಾಲಿನ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಸಂಘದ ಪದಾಧಿಕಾರಿಗಳು ಆಡಳಿತ ಮಂಡಳಿ ಹಾಗೂ ಸಂಘದ ಸಿಇಒ ನಡುವೆ ಸಮನ್ವಯ ಕೊರತೆಯಿಂದ ಸಂಘದ ಉತ್ಪಾದಕರಿಗೆ ಕಳೆದ 3 ತಿಂಗಳಿನಿಂದ ಹಣ ಪಾವತಿಸುತ್ತಿಲ್ಲ. ಹಾಲಿನ ಹಣವನ್ನೇ ನಂಬಿ ಜೀವನ ಸಾಗಿಸುತ್ತಿರುವ ನಮ್ಮನ್ನು ಸತಾಯಿಸುತ್ತಾ ಜೀವನದ ಮೇಲೆ ಬರೆ ಎಳೆದಿದ್ದಾರೆ. ಹಾಲಿನ ಹಣ ಸಿಗದೆ ಜೀವನ ನಡೆಸುವುದು ಕಷ್ಟವಾಗಿದೆ. ಬಮೂಲ್ ಅಧಿಕಾರಿಗಳು ಸ್ಥಳಕ್ಕೆ ಬಂದು ಖಚಿತ ಉತ್ತರ ಕೊಡುವವರೆಗೂ ರಸ್ತೆ ತಡೆ ನಿಲ್ಲಿಸುವುದಿಲ್ಲ ಎಂದು ಕಿಡಿಕಾರಿದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಅಕ್ಕೂರು ಠಾಣೆ ಪೊಲೀಸರು, ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಬೆಳಗ್ಗೆಯಿಂದ ರಸ್ತೆ ತಡೆಯಿಂದ ಚನ್ನಪಟ್ಟಣ-ಸಾತನೂರು ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು, ವಿದ್ಯಾರ್ಥಿಗಳು, ಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ಸೋಮವಾರದವರೆಗೆ ಸಮಯ ಕೊಡಿ ನಾವು ಸಮಸ್ಯೆ ಪರಿಹಾರ ಮಾಡುತ್ತೇವೆ. ಸದ್ಯ ರಸ್ತೆ ತಡೆ ನಿಲ್ಲಿಸಿ ಎಂದು ಮನವಿ ಮಾಡಿದರು.ನಂತರ ಸ್ಥಳಕ್ಕೆ ಬಂದ ಬಮೂಲ್ ಅಧಿಕಾರಿ ಕಿರಣ್ , ಶೀಘ್ರ ಸಮಸ್ಯೆ ಇತ್ಯರ್ಥ ಪಡಿಸುವುದಾಗಿ ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ವಾಪಸ್ ಪಡೆದರು. ರಸ್ತೆ ತಡೆಯಿಂದಾಗಿ ಚನ್ನಪಟ್ಟಣ ಸಾತನೂರು ಮಾರ್ಗದ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.