ಕನ್ನಡಪ್ರಭ ವಾರ್ತೆ ಮೈಸೂರು
ಹಿಂದುಳಿದ ವರ್ಗಗಳ (ಒಬಿಸಿ) ಸಂಶೋಧನಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವಂತೆ ಆಗ್ರಹಿಸಿ ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘದವರು ಕ್ರಾಫರ್ಡ್ ಭವನ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟಿಸಿದರು.2024- 25ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ 21 ವಿದ್ಯಾರ್ಥಿಗಳ ಪೈಕಿ 12 ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಿ, ಅನಗತ್ಯ ಷರತ್ತು ವಿಧಿಸಿ 9 ವಿದ್ಯಾರ್ಥಿಗಳ ಅರ್ಜಿ ತಿರಸ್ಕರಿಸಿರುವುದು ಸರಿಯಲ್ಲ ಎಂದು ಅವರು ಖಂಡಿಸಿದರು.
ಮೈಸೂರು ವಿವಿಯಲ್ಲೇ ಸ್ನಾತಕೋತ್ತರ ಪದವಿ ಪಡೆದಿರಬೇಕು. 3 ವರ್ಷ ಶಿಷ್ಯವೇತನ ನೀಡಲಾಗುವುದು. ಪಿಎಚ್.ಡಿ ತಾತ್ಕಾಲಿಕ ನೋಂದಣಿ ಪತ್ರ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಹಿಂದಿನ 3 ವರ್ಷದ ಒಳಗಿರಬೇಕು. 35 ವರ್ಷ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು ಎಂಬ ಅನಗತ್ಯ ಷರತ್ತುಗಳಿಂದ ರಾಜ್ಯದ ಇತರೆ ವಿವಿಗಳಿಂದ ಪದವಿ ಪಡೆದವರಿಗೆ ವಂಚನೆಯಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಶಿಷ್ಯವೇತನವನ್ನು 3 ವರ್ಷ ನೀಡುವುದರಿಂದ ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳು ಸಂಶೋಧನೆ ನಡೆಸಲು ತೊಂದರೆಯಾಗುತ್ತದೆ. ಹೀಗಾಗಿ, ಮೈಸೂರು ವಿವಿಯಲ್ಲೇ ಸ್ನಾತಕೋತ್ತರ ಪದವಿ ಪಡೆದಿರಬೇಕು ಎಂಬ ಷರತ್ತನ್ನು ಕೈ ಬಿಡಬೇಕು. ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ಯುಜಿಸಿ ನಿಯಮದಂತೆ 5 ವರ್ಷಗಳ ಕಾಲ ಶಿಷ್ಯವೇತನ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಅಲ್ಲದೇ, 35 ವರ್ಷ ಗರಿಷ್ಠ ವಯೋಮಿತಿಯನ್ನು ಸಡಿಲಗೊಳಿಸಬೇಕು. ಪಿಎಚ್.ಡಿ ತಾತ್ಕಾಲಿಕ ನೋಂದಣಿ ಪತ್ರ ಅಧಿಸೂಚನೆ ಹೊರಡಿಸಿದ ಹಿಂದಿನ 3 ವರ್ಷ ಒಳಗಿರಬೇಕು ಎಂಬ ಷರತ್ತನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.ಮೈಸೂರು ವಿವಿ ಸಂಶೋಧಕರ ಸಂಘದ ಗೌರವ ಅಧ್ಯಕ್ಷ ಸಿ. ಮಹೇಶ್, ಉಪಾಧ್ಯಕ್ಷ ಲಿಂಗರಾಜು, ಪ್ರಧಾನ ಕಾರ್ಯದರ್ಶಿ ಕುಶಾಲ್, ಖಜಾಂಚಿ ನಂಜುಂಡಸ್ವಾಮಿ, ಸಂಜಯ್ ಕುಮಾರ್, ಸುಭಾಷ್ ಮೊದಲಾದವರು ಇದ್ದರು.