ಹಾವೇರಿ: ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸುವುದು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ದಿನಗೂಲಿ ಮತ್ತು ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕದ ಮುಖಂಡರು ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಎನ್.ವಿ. ಸೊಪ್ಪಿನಮಠ ಮಾತನಾಡಿ, ಜಿಲ್ಲೆಯ ಎಲ್ಲ ಇಲಾಖೆ, ವಸತಿನಿಲಯಗಳಲ್ಲಿ ಸುಮಾರು ವರ್ಷಗಳಿಂದ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು.
ವಿವಿಧ ವಸತಿನಿಲಯಗಳಲ್ಲಿ ಕೆಲಸ ಮಾಡುವ ಅಡುಗೆಯವರು, ರಾತ್ರಿ ಕಾವಲುಗಾರರು, ಅರಣ್ಯ ಕಾವಲುಗಾರರು ಹೀಗೆ ಅನೇಕ ವಲಯದ ದಿನಗೂಲಿ ಹಾಗೂ ಹೊರಗುತ್ತಿಗೆ ನೌಕರರನ್ನು ಸರ್ಕಾರ ಕಾಯಂಗೊಳಿಸಿ, ನೇರ ಪಾವತಿಗೆ ಒಳಪಡಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಸೌಲಭ್ಯವನ್ನು ಒದಗಿಸಬೇಕು. ಇಲಾಖೆಯಿಂದ ನೌಕರರಿಗೆ ಗುರುತಿನ ಚೀಟಿಯನ್ನು ವಿತರಣೆ ಮಾಡಬೇಕು. ಕಾರ್ಮಿಕ ಇಲಾಖೆ ನಿಗದಿಪಡಿಸಿದ ವೇತನವನ್ನು ನೀಡುವಂತೆ ಒತ್ತಾಯಿಸಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಕೊಂಗಿಯವರ ಮಾತನಾಡಿ, ಹೊರಗುತ್ತಿಗೆ ನೌಕರರಿಗೆ ಕೆಲಸದ ಭದ್ರತೆಯೊಂದಿಗೆ ಸೇವಾಭದ್ರತೆ ನೀಡಬೇಕು. ಹೊರಗುತ್ತಿಗೆ ವೇತನದಲ್ಲಿ ಪಿಎಫ್, ಇಎಸ್‌ಐ ಹೊರತುಪಡಿಸಿ ಬೇರೆ ಯಾವುದೇ ರೀತಿಯ ವೇತನ ಕಡಿತ ಮಾಡಬಾರದು. ಸಾಮಾನ್ಯ ಭವಿಷ್ಯನಿಧಿ ಹಾಗೂ ವಿಮಾ ಸೌಲಭ್ಯವನ್ನು ನೀಡಬೇಕು. ನಿಲಯದ ಪ್ರವೇಶಾತಿ 100 ಸಂಖ್ಯೆಗೆ ಅನುಗುಣವಾಗಿ 6 ಜನ ಸಿಬ್ಬಂದಿಗಳನ್ನು ನೇಮಿಸಬೇಕು. ಕಡ್ಡಾಯವಾಗಿ ವಾರದ ರಜೆ ಸೌಲಭ್ಯ ನೀಡಬೇಕು. ರಜಾ ದಿನದಲ್ಲಿ ನೌಕರರು ಕೆಲಸ ನಿರ್ವಹಿಸಿದರೆ 2 ಪಟ್ಟು ವೇತನ ಕೊಡಬೇಕು. ಹೊರಗುತ್ತಿಗೆ ನೌಕರರಿಗೆ ವರ್ಷದ 12 ತಿಂಗಳು ಕೆಲಸ ನಿರ್ವಹಿಸಲು ಅವಕಾಶ ಕೊಡಬೇಕೆಂದು ಆಗ್ರಹಿಸಿದರು.ಸಂಘಟನೆ ಉಪಾಧ್ಯಕ್ಷೆ ಸುಲೋಚನಾ ಫೌತ್ನೀಸ್ ಮಾತನಾಡಿ, ಹೊರಗುತ್ತಿಗೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗೆ ಹೆರಿಗೆ ರಜೆ ಮಂಜೂರು ಮಾಡಬೇಕು. 10- 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಬಾರದು. ನ್ಯಾಯಾಲಯದಲ್ಲಿ ಹೊರಗುತ್ತಿಗೆ ನೌಕರರ ಪ್ರಕರಣಗಳ ವಿಚಾರಣೆ ಬಾಕಿ ಇರುವಾಗಲೇ ನೌಕರರನ್ನು ಅಕ್ರಮವಾಗಿ ಕೆಲಸದಿಂದ ವಜಾ ಮಾಡುತ್ತಿದ್ದು, ಈ ಅನಿಷ್ಟ ಪದ್ಧತಿಯನ್ನು ಕೈ ಬಿಡಬೇಕೆಂದು ಒತ್ತಾಯಿಸಿದರು.ಬಳಿಕ ಅಪರ ಜಿಲ್ಲಾಧಿಕಾರಿ ನಾಗರಾಜ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನೆಯ ಮುಖಂಡರಾದ ಸುಭಾಸ ಕ್ಯಾಲಕೊಂಡ, ನಾಗರಾಜ ಕಲಾಲ, ಶಿವಯ್ಯ ಗಡಾದವರ, ಭಾರತಿ ದೇಸೂರ, ಗೌರಮ್ಮ ಹಾನಗಲ್, ಗೌರಮ್ಮ ಹಿರೇಕೆರೂರ, ಹಜರತ್‌ಬಿ ನೆಗಳೂರ, ಸವಿತಾ ಕಳಸನಗೌಡ್ರ, ಪ್ರವೀಣ ಕ್ಷೀರಸಾಗರ, ಮಾಲತೇಶ ಕಮ್ಮಾರ, ರೇಣೂಕಾ ಹಾವೇರಿ, ಮುರಳಿ ಕೋಳೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.