ಹೊಸಪೇಟೆ: ಅಂಗನವಾಡಿ ನೌಕರರ ಸೇವೆಯನ್ನು ಖಾಯಂಗೊಳಿಸಬೇಕು. ಅಂಗನವಾಡಿ ಕಾರ್ಯಕರ್ತರಿಗೆ ₹41 ಸಾವಿರ, ಸಹಾಯಕಿಯರಿಗೆ ₹35 ಸಾವಿರ ಕನಿಷ್ಠ ವೇತನ ನೀಡಬೇಕು. ₹18,000 ಮಾಸಿಕ ಪಿಂಚಣಿ ನೀಡುವುದು ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸಿಐಟಿಯು ಸಂಯೋಜಿತ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
2024ರಿಂದ ಇಂದಿನವರೆಗೆ ಗೌರವಧನದಲ್ಲಿ ಒಂದು ಪೈಸೆ ಹೆಚ್ಚಿಸದೇ ಕಾರ್ಮಿಕ ಕಾನೂನುಗಳ ವ್ಯಾಪ್ತಿಯಿಂದಲೂ ಇವರನ್ನು ಹೊರಗಿಡಲಾಗಿದೆ. ಈ ಹಿನ್ನೆಲೆಯಲ್ಲಿ ನೌಕರರನ್ನು ಬಿಎಲ್‌ಓ, ಎಸ್‌ಐಆರ್ ಹಾಗೂ ಇತರೆ ಸಮೀಕ್ಷಾ ಕೆಲಸಗಳಿಂದ ಸಂಪೂರ್ಣವಾಗಿ ಮುಕ್ತಗೊಳಿಸಬೇಕು. 50 ವರ್ಷ ಮೇಲ್ಪಟ್ಟವರನ್ನು ಮತ್ತು ತೀವ್ರ ಕಾಯಿಲೆ ಇರುವವರನ್ನು ಈ ಕೆಲಸಗಳಿಂದ ತಕ್ಷಣ ಬಿಡುಗಡೆ ಮಾಡಬೇಕು. ಅಂಗನವಾಡಿ ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರು, ಗ್ಯಾಸ್ ಸಂಪರ್ಕ ಹಾಗೂ ಆಧುನಿಕ ಅಡುಗೆ ಉಪಕರಣಗಳನ್ನು ಒದಗಿಸಬೇಕು. ಬಾಡಿಗೆ ಕಟ್ಟಡಗಳ ಬಾಡಿಗೆಯನ್ನು ಮಹಾನಗರಗಳಲ್ಲಿ 15 ಸಾವಿರ ರೂ., ನಗರಗಳಲ್ಲಿ 10 ಸಾವಿರ ರೂ. ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 5 ಸಾವಿರ ರೂ. ಹೆಚ್ಚಿಸಬೇಕು. ವೈದ್ಯಕೀಯ ಪರೀಕ್ಷೆಗೊಳಪಡದ ಫೋರ್ಟಿಫೈಡ್’ ಆಹಾರದ ಬದಲಿಗೆ ತಾಜಾ ಸ್ಥಳೀಯ ಪೌಷ್ಟಿಕ ಆಹಾರವನ್ನೇ ನಿಯಮಿತವಾಗಿ ಒದಗಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಕೆ.ನಾಗರತ್ನ, ಸಂಘದ ಮುಖಂಡರಾದ ಸ್ವಪ್ನ ಕೆ ಎಂ, ಗೌರಮ್ಮ, ಜ್ಯೋತಿಶ್ವರಿ, ಶಕುಂತಲಾ, ಮಹಾಂತಮ್ಮ, ಸಿಐಟಿಯು ಮುಖಂಡರಾದ ಆರ್. ಎಸ್. ಬಸವರಾಜ, ಆರ್. ಭಾಸ್ಕರ ರೆಡ್ಡಿ, ಸ್ವಾಮಿ ಸೇರಿದಂತೆ ಇತರರು ಅಂಗನವಾಡಿ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.