ಹಗರಿಬೊಮ್ಮನಹಳ್ಳಿ: ರಾಜ್ಯಾದ್ಯಂತ ಇರುವ ದೇವದಾಸಿಯೇತರ, ಒಂಟಿ ಮಹಿಳೆಯರ ಗಣತಿ ಮಾಡಿ ದೇವದಾಸಿಯರ ಪುನರ್ವಸತಿ ಮಾದರಿಯಲ್ಲಿ ಒಂಟಿ ಮಹಿಳೆಯರ ರಕ್ಷಣೆಗೆ ಸರಕಾರ ಸೂಕ್ತ ಕ್ರಮ ಜರುಗಿಸಬೇಕು ಎಂದು ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣಾ ಸಂಘದ ರಾಜ್ಯ ಸಂಚಾಲಕಿ ಬಿ. ಮಾಳಮ್ಮ ಆಗ್ರಹಿಸಿದರು.
ರಾಜ್ಯದ ಮಹಿಳಾ ಜನಸಂಖ್ಯೆಯಲ್ಲಿ ಶೇ. 30% ರಷ್ಟು ಇರುವ ಒಂಟಿ ಮಹಿಳೆಯರು ಲಿಂಗ ತಾರತಮ್ಯ ಮತ್ತು ಜಾತಿ ತಾರತಮ್ಯಕ್ಕೊಳಗಾಗಿದ್ದು, ಸಾಮಾಜಿಕವಾಗಿ ಅಘೋಷಿತ ಬಹಿಷ್ಕಾರಕ್ಕೊಳಗಾಗಿ ಸರಕಾರಗಳ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣಗಳ ನೀತಿಯಿಂದಾಗಿ ದುಡಿಯುವ ಅವಕಾಶಗಳೇ ಬತ್ತಿ ಹೋಗಿ ಅಮಾನುಷವಾಗಿ ಬದುಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕೃಷಿ ಕ್ಷೇತ್ರದಲ್ಲಿ ಭೂಮಾಲೀಕರ ಮತ್ತು ಅವಿಭಕ್ತ ಕುಟುಂಬಗಳಲ್ಲಿ ಬಂಧುಗಳಿಂಗಲೇ ಒಂಟಿ ಮಹಿಳೆಯರು ನಿರಂತರವಾಗಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಬಲವಂತದ ವೇಶ್ಯಾವಾಟಿಗೆ ತಳ್ಳಿರುವ ನಿದರ್ಶನಗಳಿವೆ ಎಂದು ಆಪಾದಿಸಿದರು.ಪುನರ್ವಸತಿ ಸಹಿತ ಒಂಟಿ ಮಹಿಳೆಯರಿಗೆ ಮಾಸಿಕ ಪಿಂಚಣಿ ನೀಡಬೇಕು. ವಿದ್ಯಾವಂತ ಒಂಟಿ ಮಹಿಳೆಯರಿಗೆ ಸರಕಾರಿ ನೌಕರಿ ಒದಗಿಸಬೇಕು. ಸಾಮಾಜಿಕವಾಗಿ ಬಹಿಷ್ಕೃತ ಮಹಿಳೆಯರನ್ನು ಮರು ಮದುವೆಯಾಗಲು ಇಚ್ಚಿಸುವ ಪುರುಷರಿಗೆ ಪ್ರೋತ್ಸಾಹಿ ನೀಡಬೇಕು. ₹10 ಲಕ್ಷ ಸಹಾಯ ಧನ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನಂತರ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮನವಿ ಸಲ್ಲಿಸಲಾಯಿತು.ಸಿಐಟಿಯು ಸಂಚಾಲಕ ಎಸ್. ಜಗನ್ನಾಥ್, ಸಂಘದ ಅಧ್ಯಕ್ಷೆ ಜಿ. ಹುಲಿಗೆಮ್ಮ, ಕಾರ್ಯದರ್ಶಿ ಚಾಂದಬಿ, ಮುಖಂಡರಾದ ಗುರುಶಾಂತಮ್ಮ, ವೀಣಾ, ರೇಣುಕಾ, ಗಂಗಮ್ಮ, ರಂಜಿತ, ಪೂಜಾರಿ ದುರುಗಮ್ಮ, ನೇತ್ರಮ್ಮ, ಅರ್ಕಾಪುರ ರೇಣವ್ವ, ಜಯಮ್ಮ, ತಳವಾರ ಹುಲಿಗೆಮ್ಮ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.