ಕನ್ನಡಪ್ರಭ ವಾರ್ತೆ ಕಾಗವಾಡ
ಪಟ್ಟಣದ ವಿದ್ಯಾನಗರಕ್ಕೆ ಮೂಲ ಸೌಕರ್ಯಗಳಾದ ಒಳಚರಂಡಿ, ರಸ್ತೆ, ಬೀದಿ ದೀಪಗಳ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ವಿದ್ಯಾನಗರ ಮಹಿಳೆಯರು, ನಿವಾಸಿಗಳು ಜಯ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ತಹಸೀಲ್ದಾರ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು.ಪಟ್ಟಣದಲ್ಲಿ ಸದ್ಯ ನಡೆದಿರುವ ನಗರ ನೀರು ಸರಬರಾಜು ಯೋಜನೆಯ ಅವೈಜ್ಞಾನಿಕ ಕಾಮಗಾರಿಯಿಂದ ಕಾಲೋನಿಯ ರಸ್ತೆಗಳನ್ನು ಅಗೆದಿದ್ದರಿಂದ ಅವು ಹಾಳಾಗಿ, ಮಳೆ ಬಂದರೆ ಸಾಕು ಕೆಸರುಮಯವಾಗಿ ಸಾರ್ವಜನಿಕರು ನಿತ್ಯ ಓಡಾಡಲು ಪರದಾಡುವಂತಾಗಿದೆ ಎಂದು ಅಳಲು ತೋಡಿಕೊಂಡರು.ವಕೀಲರಾದ ರಾಹುಲ ಕಟಗೇರಿ ಮಾತನಾಡಿ, ಮಲ್ಲಿಕಾರ್ಜುನ ಹೈಸ್ಕೂಲ್‌ದಿಂದ ಅಟಲಜೀ ಕೇಂದ್ರದವರೆಗಿನ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆ ಹಾಳಾಗಿದ್ದು, ಮಳೆಗಾಲದಲ್ಲಿ ಸಂಚರಿಸಲು ತೊಂದರೆ ಆಗುತ್ತಿದೆ. ಈ ಬಗ್ಗೆ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದನೆ ದೊರುಕುತ್ತಿಲ್ಲ. ರಸ್ತೆಗಳು ಕೆಸರುಮಯವಾಗಿದ್ದರಿಂದ ವಯೋವೃದ್ಧರು, ಮಕ್ಕಳು ರಸ್ತೆಯಲ್ಲಿ ಹಾದು ಹೋಗುವಾಗ ಬಿದ್ದು, ಆಸ್ಪತ್ರೆ ಸೇರುತ್ತಿದ್ದಾರೆ. ಚರಂಡಿಗಳಿಲ್ಲದೆ ನೀರು ನಿಂತಲ್ಲೇ ನಿಂತು ಸೊಳ್ಳೆಗಳ ಕಾಟದಿಂದ ಡೆಂಘೀ ನಂತಹ ರೋಗಗಳಿಂದ ನಿವಾಸಿಗಳು ಹೈರಾಣಾಗಿದ್ದೇವೆ. ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ರಾಜೇಶ ಬುರ್ಲಿ ಭೇಟಿ ನೀಡಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯ ಅಧಿಕಾರಿಯನ್ನು ಸ್ಥಳಕ್ಕೆ ಕರೆಯಿಸಿ, ಪ್ರತಿಭಟನಾ ನಿರತರ ಬೇಡಿಕೆಗಳನ್ನು ಕೂಡಲೇ ಪರಿಹರಿಸುವಂತೆ ಸೂಚನೆ ನೀಡಿದರು. ನೀರು ಸರಬರಾಜು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ, ನೀರು ಸರಬುರಾಜು ಮಾಡುವ ಪೈಪ್‌ಲೈನ್‌ಗಾಗಿ ಅಗೆದಿರುವ ರಸ್ತೆಯನ್ನು ಕೂಡಲೇ ರೀಪೇರಿ ಮಾಡುವ ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಂಡರು.ಭರತ ಮೋಳೆ, ಅರುಣ ಜೋಶಿ, ಎಂ.ಬಿ.ಉದಗಾಂವೆ, ಆಕಾಶ ಮಿಠಾರೆ, ಡಾ.ಪವನ ಮಾಲಗಾಂವೆ, ಈರಗೌಡ ಪಾಟೀಲ, ಪ್ರಕಾಶ ಐನಾಪೂರೆ, ಸಾಜೀದ್ ಇನಾಮದಾರ, ಅಶ್ಪಾಕ್ ಮಕಾನಾದಾರ, ಅರುಣ ಖಾಡೆ, ಪ್ರಭಾಕರ ರೂಗೆ, ಅಶೋಕ ಮೋರೆ, ದೀಪಕ ಕರವ, ಸಚೀನ ಚಿಪ್ಪರಗಿ ಸೇರಿದಂತೆ ವಿದ್ಯಾನಗರದ ನಿವಾಸಿಗಳು, ಮಹಿಳೆಯರು ಇದ್ದರು.