ರಾಣಿಬೆನ್ನೂರು: ನಗರದ ಕಮಲಾ ನಗರದ ಬಿಸಿಎಂ ಇಲಾಖೆಯ ಬಾಲಕಿಯರ ವಸತಿನಿಲಯದಲ್ಲಿ ಊಟದ ವ್ಯವಸ್ಥೆ ಸರಿಪಡಿಸಿ, ಗುಣಮಟ್ಟದ ಆಹಾರ ನೀಡಬೇಕು ಹಾಗೂ ಸರ್ಕಾರಿ ಸೌಲಭ್ಯಗಳಿಂದ ವಿದ್ಯಾರ್ಥಿನಿಯರನ್ನು ವಂಚಿಸುತ್ತಿರುವುದನ್ನು ವಿರೋಧಿಸಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ತಾಲೂಕು ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಪ್ರತಿಭಟಿಸಿ ತಾಲೂಕು ವಿಸ್ತಾರಣಾಧಿಕಾರಿ ಪ್ರಸಾದ್ ಆಲದಕಟ್ಟಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ವಸತಿನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಸರ್ಕಾರ ನೀಡುವ ಮೂಲ ಸೌಲಭ್ಯಗಳು ಹಾಗೂ ಮೇನು ಚಾರ್ಟ್ ಪ್ರಕಾರವಾಗಿ ಊಟ, ಉಪಚಾರ ಸಿಗುತ್ತಿಲ್ಲ. ತರಕಾರಿ ಸಾಂಬಾರ, ಪಲ್ಯೆಗಳಲ್ಲಿ ತರಕಾರಿ ಹಾಕುವುದಿಲ್ಲ, ಬರಿ ಬೇಳೆ ಸಾರು ಮಾಡುತ್ತಾರೆ. ಮಂಡಕ್ಕಿ ಸೇರಿದಂತೆ ವಿವಿಧ ತಿಂಡಿ ತಿನಿಸುಗಳಲ್ಲಿ ಅಡುಗೆ ಎಣ್ಣೆ ಬಳಸುವುದಿಲ್ಲ. ಒಟ್ಟಾರೆ ರುಚಿಕರ ಆಹಾರ ನೀಡುವುದಿಲ್ಲ. ಪ್ರತಿ ಬುಧವಾರ ನೀಡಬೇಕಾದ ಚಿಕನ್ ಕೂಡ ಕತ್ತರಿ ಹಾಕಿ ಕೇವಲ ತಿಂಗಳಿಗೆ ಎರಡು ಬಾರಿ ನೀಡುತ್ತಿದ್ದಾರೆ. 200ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೇವಲ ನಾಲ್ಕು ಕೆಜಿ ಚಿಕನ್ ನೀಡುತ್ತಾರೆ. ಮೊಟ್ಟೆ, ಬಾಳೆಹಣ್ಣಗಳನ್ನು ಸರಿಯಾಗಿ ನೀಡುವುದಿಲ್ಲ.
ಪ್ರತಿ ವಸತಿ ನಿಲಯಗಳಲ್ಲೂ ಆಯುಕ್ತರ ಆದೇಶದ ಪ್ರಕಾರ ಊಟದ ಮೆನು ಅಳವಡಿಸಬೇಕು. ಉಲ್ಲಂಘನೆ ಮಾಡಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ದೂರು ನೀಡಲಾಗುವುದು ಎಂದು ಎಚ್ಚರಿಸಿದರು. ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಗೌತಮ್ ಸಾವಕ್ಕನವರ, ಉಪಾಧ್ಯಕ್ಷ ಬಸವರಾಜ ಕೊಣಸಾಲಿ, ಮಹೇಶ ಮರೋಳ, ಗುಡ್ಡಪ್ಪ ಮಡಿವಾಳರ, ನೀಲಮ್ಮ ಕಡಕೋಳ, ಸುಮತಿ ಕರೆಯಣ್ಣನವರ, ರಾಧಿಕಾ ಹೊನ್ನಪ್ಪನವರ, ನಾಗರತ್ನ ಸಿ.ಎಸ್., ಕಾವ್ಯ ರಾಠೋಡ್, ಭಾಗೀರಥ ಯಳಮೇಲೆ, ಪ್ರಿಯಾ ಎಚ್., ಮೇಘಾ ವೈ., ಭವ್ಯ, ಚೈತ್ರ ಬಿ.ಕೆ., ಸಂಗೀತಾ, ರಕ್ಷಿತಾ ಆರ್., ಸುಪ್ರಿತಾ ಎಸ್., ಮಾಲಾ ಎನ್.ಕೆ. ಸೇರಿದಂತೆ ನೂರಾರು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.