ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Aug 19, 2026, 02:15 AM IST
ಕಂಪ್ಲಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕಾಲುವೆಗಳಿಗೆ ಜಂಟಿ ನೀರು ಹರಿಸುವಂತೆ ಆಗ್ರಹಿಸಿ ಬಿಜೆಪಿ ವತಿಯಿಂದ ಮಂಗಳವಾರ ನಡೆ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಟಿ.ಎಚ್. ಸುರೇಶ್‌ಬಾಬು, ಬಿಜೆಪಿ ಮಂಡಲ ಅಧ್ಯಕ್ಷ ಸಿ.ಡಿ. ಮಹಾದೇವ ಹಾಗೂ ಮುಖಂಡರು, ರೈತರು ಭಾಗವಹಿಸಿದ್ದರು. | Kannada Prabha

ಸಾರಾಂಶ

ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಕಂಪ್ಲಿಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಕಂಪ್ಲಿ: ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಮಾಜಿ ಶಾಸಕ ಟಿ.ಎಚ್. ಸುರೇಶ್‌ಬಾಬು ಮಾತನಾಡಿ, ಜಲಾಶಯದಲ್ಲಿ ಸಮರ್ಪಕ ಪ್ರಮಾಣದ ನೀರು ಲಭ್ಯವಿದ್ದರೂ ರೈತರ ಕೃಷಿ ಚಟುವಟಿಕೆಗೆ ಅಗತ್ಯವಿರುವಂತೆ ಕಾಲುವೆಗಳಿಗೆ ನೀರು ಹರಿಸಲು ಸರ್ಕಾರ ಹಾಗೂ ಸ್ಥಳೀಯ ಶಾಸಕರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಜಲಾಶಯದಲ್ಲಿ ಕೇವಲ 35 ಟಿಎಂಸಿ ನೀರು ಇದ್ದ ಸಂದರ್ಭದಲ್ಲಿಯೇ ಬಿಜೆಪಿ ಸರ್ಕಾರ ಕಾಲುವೆಗಳಿಗೆ ನೀರು ಹರಿಸಿ ರೈತರ ಬೆಳೆಗಳಿಗೆ ಅನುಕೂಲ ಮಾಡಿಕೊಟ್ಟಿತ್ತು. ರೈತರು ನೀರಿಗಾಗಿ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗದಂತೆ ಬಿಜೆಪಿ ಸರ್ಕಾರ ಕ್ರಮ ಕೈಗೊಂಡಿತ್ತು. ಆದರೆ, ಇದೀಗ ಜಲಾಶಯದಲ್ಲಿ ಸುಮಾರು 93 ಟಿಎಂಸಿ ನೀರು ಸಂಗ್ರಹವಿದ್ದರೂ ಕಾಲುವೆಗಳಿಗೆ ಜಂಟಿ ನೀರು (ಕರ್ನಾಟಕ, ಆಂಧ್ರ) ಹರಿಸಲು ಕಾಂಗ್ರೆಸ್ ಸರ್ಕಾರ ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಚಿವ ಸ್ಥಾನಕ್ಕಾಗಿ ಮೂರು ತಿಂಗಳಿನಿಂದ ಕಾಯುತ್ತಿರುವ ಶಾಸಕರಿಗೆ ರೈತರ ನೀರಿನ ಸಮಸ್ಯೆ ಅರ್ಥವಾಗುತ್ತಿಲ್ಲ. ರೈತರು ಒಗ್ಗಟ್ಟಾಗಿ ಹೋರಾಟ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಬೇಕು ಎಂದು ಕರೆ ನೀಡಿದರು.

ಕಾಲುವೆಗಳಿಗೆ ಜಂಟಿ ನೀರು ಹರಿಸದಿದ್ದರೆ ಮುಂದಿನ ದಿನಗಳಲ್ಲಿ ಶಾಸಕರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು. ಆ. 19ರಂದು ರೈತರೊಂದಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ಮುನಿರಾಬಾದ್ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುವುದು ಎಂದು ಎಚ್ಚರಿಸಿದರು.

ಸಚಿವ ತಂಗಡಗಿ ಅವರು ತಮ್ಮ ಭಾಗದ ಕಾಲುವೆಗಳ ವಿಚಾರವಾಗಿ ಮಾತ್ರ ಮಾತನಾಡುತ್ತಿದ್ದು, ಈ ಭಾಗದ ರೈತರ ಸಮಸ್ಯೆಗಳ ಬಗ್ಗೆ ಕಾಳಜಿ ತೋರುತ್ತಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಸಿ.ಡಿ. ಮಹಾದೇವ ಮಾತನಾಡಿ, ರೈತರ ಬೆಳೆಗಳಿಗೆ ಪ್ರಸ್ತುತ ನೀರು ಅತ್ಯಂತ ಅಗತ್ಯವಾಗಿದೆ. ಜಲಾಶಯದಲ್ಲಿ ನೀರಿದ್ದರೂ ಕಾಲುವೆಗಳಿಗೆ ಸಮರ್ಪಕವಾಗಿ ಹರಿಸದಿರುವುದು ರೈತರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಸರ್ಕಾರ ರೈತರ ಹಿತವನ್ನು ಕಡೆಗಣಿಸಿ ಜಲಾಶಯದ ನೀರನ್ನು ಕೈಗಾರಿಕೆಗಳಿಗೆ ಬಳಸಲು ಮುಂದಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ರೈತರ ಕೃಷಿ ಚಟುವಟಿಕೆಗೆ ಮೊದಲ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಮುಖಂಡರಾದ ಅಳ್ಳಳ್ಳಿ ವೀರೇಶ್, ಎಸ್.ಎಂ. ನಾಗರಾಜ ಮಾತನಾಡಿ, ರೈತರ ಬೆಳೆಗಳಿಗೆ ನೀರು ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ನೀರಿನ ಸಮಸ್ಯೆಯಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸುವ ಸರ್ಕಾರಕ್ಕೆ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ. 2028ರ ಚುನಾವಣೆಯಲ್ಲಿ ರೈತರ ವಿರೋಧಿ ನೀತಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಪ್ರಮುಖರಾದ ಕಡೇಮನಿ ಪಂಪಾಪತಿ, ಎನ್. ಚಂದ್ರಕಾಂತರೆಡ್ಡಿ, ಟಿ.ವಿ. ಸುದರ್ಶನರೆಡ್ಡಿ, ಹೂವಣ್ಣ, ಕರಿಬಸಯ್ಯ, ಎಸ್. ಚಂದ್ರಶೇಖರಗೌಡ, ಬಿ. ನಾಗೇಂದ್ರ, ಬಿ. ದೇವೇಂದ್ರ, ಬಿ.ಕೆ. ವಿರೂಪಾಕ್ಷಿ, ಜಂಗಾ ನಾಗರಾಜ, ಎಚ್. ಪಂಪಾಪತಿ, ವೆಂಕಟರಾಮರಾಜು, ಎಸ್. ಈರಣ್ಣ, ಬಂಡಿ ಜಡೆಪ್ಪ, ಸಿ.ಎ. ಚನ್ನಪ್ಪ, ಜಿ. ಲಿಂಗನಗೌಡ, ಜಿ. ಶ್ರೀನಿವಾಸುಲು, ಎ.ಎಂ. ಲಲಿತಾ, ಜ್ಯೋತಿ, ಕೆ. ಪ್ರಶಾಂತ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರು, ಮಕ್ಕಳಿಂದ ಹೊಳೆ ಗಂಗಾ ಪೂಜೆ
ಕೂಲಿಕಾರರಿಗೆ ಸ್ಕೀಂನ ಲಾಭ ಪಡೆಯಲಿ: ಪಾಟೀಲ್