ಕಲುಷಿತ ನೀರು ಹರಿಬಿಡುವ ಅಕ್ಕಿಗಿರಣಿಗಳು: ಆರೋಗ್ಯದ ಮೇಲೆ ದುಷ್ಪರಿಣಾಮದ ಆತಂಕ
ಕನ್ನಡಪ್ರಭ ವಾರ್ತೆ ಕಾರಟಗಿ
ತಾಲೂಕಿನ ಮರ್ಲಾನಹಳ್ಳಿ ಗ್ರಾಪಂ ವ್ಯಾಪ್ತಿಯ ರವಿನಗರ ಬಳಿ ಇರುವ ರೆಡ್ಡಿ ವೀರಣ್ಣ ಸಂಜೀವಪ್ಪ ವಸತಿ ಶಾಲೆ ಮುಂದೆ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ ಕೆಲ ಹೊತ್ತು ಆರ್.ಜಿ. ಮುಖ್ಯರಸ್ತೆಯಲ್ಲಿ ಧರಣಿ ನಡೆಸಿದರು. ಅಕ್ಕಿಗಿರಣಿಗಳಿಂದ ಹೊರ ಬರುವ ತ್ಯಾಜ್ಯ, ಕಲುಷಿತ ನೀರು ಸರಿಯಾಗಿ ಯಾವುದೇ ಮಾನದಂಡಗಳನ್ನು ಅನುಸರಿಸದೆ ಅಕ್ಕಿಗಿರಣಿಗಳು ಹೊರ ಹರಿ ಬಿಡುತ್ತವೆ. ತ್ಯಾಜ್ಯದ ನೀರು ಹರಿಯುತ್ತ ಕಾಲುವೆ ಸೇರಿ ಕಾಲುವೆಯ ನೀರನ್ನು ಸಹ ಕಲುಷಿತಗೊಳಿಸುತ್ತಿದೆ.
ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಸಂಘದ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಡಮನಿ ಮಾತನಾಡಿ, ತಾಲೂಕಿನ ಮರ್ಲಾನಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ೬ ರೈಸ್‌ಮಿಲ್‌ಗಳಿಂದ ಈ ಕಲುಷಿತ ನೀರು ಮತ್ತು ಧೂಳಿನಿಂದ ಸ್ಥಳೀಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ, ಗ್ರಾಪಂಗೆ ದೂರು ಸಲ್ಲಿಸಿದರೂ ಪ್ರಯೋಜವಾಗಿಲ್ಲ. ಈ ಕೂಡಲೇ ಜಿಲ್ಲಾಡಳಿತ ಸಮಸ್ಯೆ ಪರಿಹರಿಸಬೇಕು. ಸಚಿವ ಶಿವರಾಜ ತಂಗಡಗಿ ಅವರಿಗೆ ಮನವಿ ಕೊಟ್ಟರು ಪ್ರಯೋಜನವಾಗಿಲ್ಲ. ಮುಂದಿನ ನಾಲ್ಕೈದು ದಿನಗಳಲ್ಲಿ ತಹಸೀಲ್ದಾರ್ ಸ್ಥಳಕ್ಕೆ ಆಗಮಿಸಿ ಸಮಸ್ಯೆಗಳ ಬಗ್ಗೆ ಗ್ರಾಮಸಭೆ ಮಾಡಬೇಕು. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಶೀಘ್ರವೇ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಮಾಹಿತಿ ಹಕ್ಕು ವೇದಿಕೆ ಜಿಲ್ಲಾಧ್ಯಕ್ಷ ಶಿವನಾರಾಯಣ ಮಾತನಾಡಿದರು.ಸ್ಥಳಕ್ಕೆ ಭೇಟಿ ನೀಡಿದ ಪಿಐ ಸುಧೀರ್ ಬೆಂಕಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ನಾಲ್ಕು ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.