ಪಪಂ ಅಂಗಡಿ ಮಳಿಗೆಗಳ ಹರಾಜಿನಲ್ಲಿ ಮೀಸಲಿಗೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Jan 21, 2025, 12:31 AM IST
20ಕೆಆರ್ ಎಂಎನ್ 5.ಜೆಪಿಜಿ ಹಾರೋಹಳ್ಳಿ ತಾಲೂಕು ಕಚೇರಿ ಎದುರು ಅಂಗಡಿ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಹಾರೋಹಳ್ಳಿ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಜಮಾವಣೆಗೊಂಡ ಕಾರ್ಯಕರ್ತರು, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಕೂಡಲೇ ಚಾಲನೆ ನೀಡುವುದು ಹಾಗೂ ಎಸ್.ಸಿ., ಎಸ್.ಟಿಗಳಿಗೆ ಮೀಸಲಾತಿ ನೀಡುವಂತೆ ಘೋಷಣೆಗಳನ್ನು ಕೂಗಿದರು.

ಕನ್ನಡಪ್ರಭ ಹಾರೋಹಳ್ಳಿ

ಪಟ್ಟಣ ಪಂಚಾಯಿತಿ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಅನುಕೂಲವಾಗುವಂತೆ ಹರಾಜು ಮಾಡಲು ಮಾಡಿದ್ದ ಮನವಿಯನ್ನು ತಾಲೂಕು ಆಡಳಿತ ಧಿಕ್ಕರಿಸಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ದಲಿತಪರ ಸಂಘಟನೆಗಳ ಒಕ್ಕೂಟ ತಾಲೂಕು ಕಚೇರಿ ಎದುರು ಕರಪತ್ರ ಚಳುವಳಿ ನಡೆಸಿ ಪ್ರತಿಭಟಿಸಿದರು.

ಹಾರೋಹಳ್ಳಿ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಜಮಾವಣೆಗೊಂಡ ಕಾರ್ಯಕರ್ತರು, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಕೂಡಲೇ ಚಾಲನೆ ನೀಡುವುದು ಹಾಗೂ ಎಸ್.ಸಿ., ಎಸ್.ಟಿಗಳಿಗೆ ಮೀಸಲಾತಿ ನೀಡುವಂತೆ ಘೋಷಣೆಗಳನ್ನು ಕೂಗಿದರು.

ಸಮತಾ ಸೈನಿಕ ದಳದ ಯುವ ರಾಜ್ಯ ಘಟಕದ ಅಧ್ಯಕ್ಷ ಡಾ.ಜಿ.ಗೋವಿಂದಯ್ಯ ಹಾಗೂ ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷ ಚಂದ್ರು ಮಾತನಾಡಿ, ಹಾರೋಹಳ್ಳಿ ತಾಲೂಕು ಆದ ಬಳಿಕ ಅಂಗಡಿ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ಮೀಸಲಾತಿ ಆದೇಶ ಹೊರಡಿಸುವಂತೆ ಮನವಿ ಮಾಡಿದ್ದರೂ ಇದುವರೆಗೂ ನಮ್ಮ ಮನವಿಗೆ ಕ್ಯಾರೇ ಎನ್ನದೇ ನಿರ್ಲಕ್ಷ್ಯ ವಹಿಸಿದ್ದಾರೆ. ಇದು ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತೀಯ ಕಾನೂನು ಆಧರಿತ ಮೀಸಲಾತಿ ಸೌಲಭ್ಯವನ್ನು ಶೇಕಡಾವಾರು ಪ್ರಮಾಣದ ಮೇಲೆ ಸರ್ಕಾರದಲ್ಲಿ ಸೇವಾವಕಾಶವನ್ನು ಒದಗಿಸಬೇಕೆಂಬ ನಿಯಮವಿದೆ, ಆದರೆ ತಾಲೂಕು ಆಡಳಿತದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದೆ ನಮ್ಮ ಮೇಲೆ ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ, ಈಗಾಗಲೇ 8 ತಿಂಗಳಿಂದ ಮನವಿ ಮಾಡಲಾಗಿತ್ತು,

ಕಳೆದ ಒಂದು ತಿಂಗಳ ಹಿಂದೆ ಅವರೇ ಗಡುವು ನೀಡಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇವರ ಸಂವಿಧಾನ ವಿರೋಧಿ ನಡೆ ವಿರೋಧಿಸಿ ಜನವರಿ 23ರಂದು ಹಾರೋಹಳ್ಳಿಯಿಂದ ರಾಮನಗರ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗುವುದು. ಅದಕ್ಕೂ ಮಣಿಯದಿದ್ದರೆ ಹಾರೋಹಳ್ಳಿ ಪಟ್ಟಣ ಪಂಚಾಯಿತಿಯ ಎದುರು ಈ ತಿಂಗಳ ಕೊನೆಯಲ್ಲಿ ತಮಟೆ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬಂಧನಕ್ಕೆ ಆಗ್ರಹ:

ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ರಟಕಲ್ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಗಂಗಮ್ಮ ತಾನೊಬ್ಬ ಅಧಿಕಾರಿ ಎನ್ನುವುದನ್ನು ಮರೆತು ಜಾತಿ ನಿಂದನೆ ಮಾಡಿ ಸಾಮಾಜಿಕವಾಗಿ ಅಸಭ್ಯವಾಗಿ ವರ್ತಿಸಿರುವ ಕಾರಣ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕೂಡಲೇ ಬಂಧಿಸಬೇಕೆಂದು ದಲಿತ ಮುಖಂಡರು ತಾಲೂಕು ತಹಸೀಲ್ದಾರ್‌ರಿಗೆ ಮನವಿ ಪತ್ರ ಸಲ್ಲಿಸಿದರು.

ಸಂವಿಧಾನಾತ್ಮಕ ಆಡಳಿತ ಮಾಡುವ ಇವರು ನಿಯಮ ಗಾಳಿಗೆ ತೂರಿ ಕೆಳ ಸಮುದಾಯವನ್ನು ಅಪಮಾನ ಮಾಡಿರುವುದರಿಂದ ಇವರ ಮೇಲೆ ಎಸ್.ಸಿ ಎಸ್.ಟಿ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಕೋಟೆಕುಮಾರ್, ಅಶೋಕ್‌ಕುಮಾರ್, ಪ್ರಕಾಶ್, ವಾಲೆ ವೆಂಕಟೇಶ್, ಬನಶಂಕರಿ ನಾಗು, ನಂದಕುಮಾರ್, ಮರಳವಾಡಿ ಮಂಜು, ಕಾಳಮ್ಮ, ಅಂಜನಮೂರ್ತಿ, ಮಂಜುನಾಥ್, ಮುನಿನಗರ ಶಂಕರ್, ಅನಂತಕುಮಾರ್, ರೂಪೇಶ್ ಮತ್ತಿತರರು ಭಾಗವಹಿಸಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ