ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ

KannadaprabhaNewsNetwork |  
Published : Jul 13, 2025, 01:18 AM IST

ಸಾರಾಂಶ

ಕರ್ನಾಟಕ ರಾಜ್ಯ ಎಸ್.ಸಿ., ಎಸ್.ಟಿ. ಅಲೆಮಾರಿ ಬುಡಕಟ್ಟು ಮಹಾಸಭಾ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ತುಮಕೂರು

ಅಲೆಮಾರಿ ಸಮುದಾಯದ ಮುಖಂಡರ ಮೇಲೆ ಸುಳ್ಳು ಕೇಸು ದಾಖಲಿಸಿರುವ ಕರ್ನಾಟಕ ರಾಜ್ಯ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಪಲ್ಲವಿಯವರ ರಾಜೀನಾಮೆ ಪಡೆಯುವಂತೆ ಮತ್ತು ಅವರ ಕಾರ್ಯದರ್ಶಿ ಆನಂದಕುಮಾರ್ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ಎಸ್.ಸಿ., ಎಸ್.ಟಿ. ಅಲೆಮಾರಿ ಬುಡಕಟ್ಟು ಮಹಾಸಭಾ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.

2025 ರ ಜುಲೈ 5ರಂದು ಬೆಂಗಳೂರಿನ ಗಾಂಧಿಭವನದಲ್ಲಿ ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದಲ್ಲಿ ಪರಿಶಿಷ್ಟ ಜಾತಿಯ 49 ಅಲೆಮಾರಿ ಸಮುದಾಯಗಳ ಮುಖಂಡರ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ 49 ಅಲೆಮಾರಿ ಸಮುದಾಯಗಳ ಕುಂದು-ಕೊರತೆ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಪಲ್ಲವಿಯವರು ಮತ್ತು ಅವರ ಆಪ್ತ ಕಾರ್ಯದರ್ಶಿ ಆನಂದ್ ಕುಮಾರ್ ಮತ್ತು ಇತರರು ಸಭೆಗೆ ಕರೆಯದಿದ್ದರೂ ಬಂದು ಇಲ್ಲ-ಸಲ್ಲದ ಮಾತುಗಳನ್ನಾಡಿ ಗೊಂದಲವನ್ನುಂಟು ಮಾಡಿದ್ದಾರೆ

ಅಲೆಮಾರಿ ಸಮುದಾಯದ ಏಳು ಜನ ಮುಖಂಡರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿದ್ದು, ಅಧ್ಯಕ್ಷರು ಮತ್ತು ಆಪ್ತ ಕಾರ್ಯದರ್ಶಿ ಇಬ್ಬರೂ ಬಲಾಢ್ಯ ಕೊರಚ-ಕೊರಮ ಸಮುದಾಯಕ್ಕೆ ಸೇರಿದವರಾಗಿದ್ದು, ರಾಜ್ಯದಲ್ಲಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದವರಾಗಿದ್ದು, ಆರ್ಥಿಕವಾಗಿ, ರಾಜಕೀಯವಾಗಿ ಸಬಲರಾಗಿದ್ದು ಇವರು ಅತೀ ಕಟ್ಟಕಡೆಯ ಸಮುದಾಯವಾಗಿ ಗುರುತಿಸಿಕೊಂಡಿರುವ ಅಲೆಮಾರಿ ಸಮುದಾಯಗಳ ಮೇಲೆ ದಬ್ಬಾಳಿಕೆ ಮಾಡುವ ಉದ್ದೇಶದಿಂದ ಮತ್ತು ಆ ಸಮುದಾಯಗಳಿಗೆ ದೊರೆಯಬೇಕಾದ ಸರ್ಕಾರಿ ಸೌಲಭ್ಯಗಳನ್ನು ತಮ್ಮ ಸಮುದಾಯಕ್ಕೆ ದೊರಕಿಸಿ ಕೊಡುವ ದುರುದ್ದೇಶ ಹೊಂದಿದ್ದಾರೆಂದು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

49 ಅಲೆಮಾರಿ ಸಮುದಾಯದ ಮುಖಂಡರ ಮೇಲೆ ಸುಳ್ಳು ಕೇಸು ದಾಖಲಿಸಿ ದೌರ್ಜನ್ಯವೆಸಗುತ್ತಿರುವ ಪಲ್ಲವಿಯವರ ರಾಜೀನಾಮೆ ಪಡೆದು, ಆಪ್ತ ಕಾರ್ಯದರ್ಶಿ ಆನಂದ ಕುಮಾರ್ ಅವರನ್ನು ಅಮಾನತು ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಇವರ ಮೇಲೆ ಕ್ರಮಕೈಗೊಳ್ಳದಿದ್ದರೆ ಬೆಂಗಳೂರಿನ ಸ್ವತಂತ್ರ ಚೌಕದಲ್ಲಿ 49 ಅಲೆಮಾರಿ ಸಮುದಾಯಗಳು ಪ್ರತಿಭಟನೆ ಹಮ್ಮಿಳ್ಳುವುದಾಗಿ ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ತುಮಕೂರು ಜಿಲ್ಲಾ ಹಂದಿಜೋಗಿ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ರಂಗಸ್ವಾಮಿ ತಿಪಟೂರು, ಶ್ರೀನಿವಾಸ್ ರಾಜ್ಯ ಎಸ್.ಸಿ., ಎಸ್.ಟಿ.ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾಧ್ಯಕ್ಷ ವೆಂಕಟಸ್ವಾಮಿ, ಸಿಳ್ಳೆಕ್ಯಾತ ಸಮುದಾಯದ ರಾಮಣ್ಣ, ದಕ್ಕಲಿಗ ಸಮುದಾಯದ ಜಿಲ್ಲಾಧ್ಯಕ್ಷ ಲಕ್ಷ್ಮೀನರಸಿಂಹ, ಕೇಶವ, ಸುರೇಶ್, ರವಿ, ಮತ್ತು ಸುಡಗಾಡು ಸಿದ್ದರ ಸಮುದಾಯದ ಕೆ.ಎನ್,ಶಂಕರಪ್ಪ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಜ್ರ, ಚಿನ್ನ ಪತ್ತೆಗೆ 6.71 ಲಕ್ಷ ಹೆಕ್ಟೇರ್‌ ಭೂ ಗುರುತು
ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ